ಸುಬ್ರಹ್ಮಣ್ಯ ; ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.ಮುಖ್ಯಮಂತ್ರಿ ಆಗಮನವಾಗುತ್ತಿದ್ದಂತೆ ಮಳೆಯ ಸಿಂಚನ ಪ್ರಾರಂಭವಾಯಿತು.
ದ.ಕ ಜಿಲ್ಲೆಯ ಹಲವು ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಧರ್ಮಸ್ಥಳ, ಕೊಲ್ಲೂರು, ಕಟೀಲು ದೇವಸ್ಥಾನಗಳಿಗೆ ಹೆಚ್ಚಾಗಿ ಭೇಟಿ ನೀಡುತಿದ್ದು ಇಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿ ಕರ್ನಾಟಕ ಜನತೆಯ ಸುಭೀಕ್ಷೆಗಾಗಿ ಪ್ರಾರ್ಥಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಅವರು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಮಾದ್ಯಮದೊಂದಿಗೆ ಮಾತನಾಡಿದರು. ಧರ್ಮಸ್ಥಳಕ್ಕೆ ಆಗಮಿಸಿದ ಬಳಿಕ ಹೆಲಿಕಾಪ್ಟರ್ ಮೂಲಕ ಕಡಬದ ಬಿಳಿನೆಲೆಗೆ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಡಾ. ನಿಂಗಯ್ಯ ಹೂಗುಚ್ಚ ನೀಡಿ ಅವರು ಸ್ವಾಗತಿಸಿದರು.
ಮುಖ್ಯಮಂತ್ರಿಯವರು ಆಡಳಿತ ಕಛೇರಿಗೆ ತೆರಳಿ ವಸ್ರ್ತ ಬದಲಿಸಿ ದೇವಸ್ಥಾನಕ್ಕೆ ತೆರಳಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಬಳಿಕ ನರಸಿಂಹ ಸ್ವಾಮಿ ದೇವರ ದರ್ಶನ ಪಡೆದರು. ಹೊಸಲಿಗಮ್ಮ ದೈವದ ದರ್ಶನ ಪಡೆದು ಅಲ್ಲಿಂದ ನಿರ್ಗಮಿಸಿದರು. ಮುಖ್ಯಮಂತ್ರಿ ಅವರು ದೇಗುಲಕ್ಕೆ ಆಗಮಿಸುತ್ತಿದ್ದಂತೆ ಮಳೆಯ ಸಿಂಚನ ಆಗಿರುವುದು ವಿಶೇಷವಾಗಿತ್ತು.