ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಬೆಂಗಳೂರಿನ ಯಲಹಂಕ ನಿವಾಸಿ ಶ್ರೀಕಾಂತ್ (28) ಎಂದು ಗುರುತಿಸಲಾಗಿದೆ. ಶ್ರೀಕಾಂತ್ ಅವರು ಸ್ನೇಹಿತರೊಂದಿಗೆ ಜುಲೈ 17ರಂದು ಕೊಡಚಾದ್ರಿ ಪ್ರವಾಸಕ್ಕೆ ಆಗಮಿಸಿದ್ದು, ಸಂಪೆಕಟ್ಟೆ ಸಮೀಪದ ಕಟ್ಟಿನಹೊಳೆ ಗ್ರಾಮದ ಸ್ನೇಹಿತರ ಮನೆಯಲ್ಲಿ ತಂಗಿದ್ದರು. ಇಂದು ಬೆಳಗ್ಗೆ ಕೊಡಚಾದ್ರಿ ಶಿಖರ ವೀಕ್ಷಣೆಗೆ ತೆರಳುವ ಯೋಜನೆ ಹೊಂದಿದ್ದ ಅವರು, ಶನಿವಾರ ರಾತ್ರಿ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ನೇಹಿತರು ಅವರನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಮೃತದೇಹವನ್ನು ಹೊಸನಗರ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು, ಹೊಸನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (ಯುಡಿಆರ್) ಪ್ರಕರಣ ದಾಖಲಾಗಿದೆ.
ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಗಮನಾರ್ಹವಾಗಿ, ಕಳೆದ ಒಂದು ತಿಂಗಳ ಅಂತರದಲ್ಲಿ ಕೊಡಚಾದ್ರಿ ಪ್ರವಾಸಿ ತಾಣದಲ್ಲಿ ಸಂಭವಿಸಿದ ಎರಡನೇ ಸಾವು ಇದಾಗಿದೆ.


