ವಿಜಯಪುರ : ಕೃಷ್ಣಾ ನದಿ ತೀರದಲ್ಲಿ ಇಸ್ಪೀಟ್ ಜೂಜಾಟವಾಡುತ್ತಾ ಕುಳಿತ್ತಿದ್ದ 8 ಜನರ ಗ್ಯಾಂಗ್ ಪೊಲೀಸರು ಬರುತ್ತಿದ್ದ ಸುಳಿವು ಸಿಕ್ಕಿ, ತೆಪ್ಪದಲ್ಲಿ ನದಿ ದಾಟಲು ಮುಂದಾಗಿದ್ದಾರೆ. ಆದರೆ, ನದಿಯಲ್ಲಿ ಹೋಗುವಾಗ ಜೋರಾದ ಗಾಳಿ ಬೀಸಿದ್ದರಿಂದ ತೆಪ್ಪ ಮುಗುಚಿ ಬಿದ್ದಿದೆ. ಇಬ್ಬರು ಈಜಿ ದಡ ಸೇರಿದರೆ ಉಳಿದ 6 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿವೆ.
ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ನಿನ್ನೆ ಸಾಯಂಕಾಲ 4 ಗಂಟೆಗೆ ಘಟನೆ ನಡೆದಿದ್ದು, ಈ ವೇಳೆ ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದೆ. ಆದರೆ ನಿನ್ನೆ ಓರ್ವನ ಮೃತದೇಹ ಸಿಕ್ಕಿದ್ದು, ಇಂದು ಮತ್ತೊಬ್ಬನ ಮೃತದೇಹ ಸಿಕ್ಕಿದೆ.
ಇಸ್ಪೀಟ್ ಆಡುತ್ತಿದ್ದವರಿಗೆ ಗ್ರಾಮದಲ್ಲಿದ್ದ ಒಬ್ಬ ಸ್ನೇಹಿತ ಕರೆ ಮಾಡಿ ಪೊಲೀಸರು ದಾಳಿ ಮಾಡಲು ಬಂದಿದ್ದು, ನೀವು ತಪ್ಪಿಸಿಕೊಳ್ಳಿ ಎಂದು ಮಾಹಿತಿ ನೀಡಿದ್ದಾನೆ. ಇದರಿಂದ ಪೊಲೀಸರು ಬರುವ ಸುಳಿವು ಸಿಗುತ್ತಿದ್ದಂತೆಯೇ 8 ಜನರೂ ಒಂದೇ ತೆಪ್ಪದಲ್ಲಿ ನದಿಯನ್ನು ದಾಟಿ ನಡುಗಡ್ಡೆಯ ಕಡೆಗೆ ಹೋಗಲು ಮುಂದಾಗಿದ್ದಾರೆ. ಆದರೆ, ನದಿಯ ನಡುಭಾಗಕ್ಕೆ ಹೋಗುತ್ತಿದ್ದಂತೆ ಗಾಳಿ ಹೆಚ್ಚಾಗಿದ್ದರಿಂದ ತೆಪ್ಪ ವಾಲಿಕೊಂಡು ಮಗುಚಿ ಬಿದ್ದಿದೆ. ಇದರಿಂದ ಎಲ್ಲರೂ ನೀರಿನಲ್ಲಿ ಬಿದ್ದಿದ್ದಾರೆ. ಅದರಲ್ಲಿ ಇಬ್ಬರು ಈಜಿಕೊಂಡು ದಡ ಸೇರಿದ್ದಾರೆ. ಆದರೆ ಉಳಿದ ಆರು ಜನರು ಈಜಿಕೊಂಡು ಬರಲಾಗದೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


