ಮೈಸೂರು : 2023ರ ಸಂಸತ್ ಭದ್ರತಾ ಲೋಪ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮೈಸೂರಿನ ಮನೋರಂಜನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿಯ ಎನ್‌ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಮನೋರಂಜನ್ ಜೊತೆಗೆ ಉತ್ತರ ಪ್ರದೇಶದ ಸಾಗರ್ ಶರ್ಮಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ವಜಾಗೊಳಿಸಿದೆ.
2023ರ ಡಿಸೆಂಬರ್ 13ರಂದು ಸಂಸತ್‌ನಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಹಳದಿ ಬಣ್ಣದ ಹೊಗೆ ಹೊರಸೂಸುವ ಸ್ಮೋಕ್ ಬಾಂಬ್ ಬಳಸಿ ಆರೋಪಿಗಳು ಆತಂಕ ಸೃಷ್ಟಿಸಿದ್ದರು. ಸಂಸತ್ ಮೇಲಿನ ದಾಳಿಯ 22ನೇ ವರ್ಷದ ದಿನದಂದೇ ಈ ಘಟನೆ ನಡೆದಿತ್ತು. ಆರೋಪಿಗಳು ತಮ್ಮ ಕಾಲಿನ ಶೂಗಳಲ್ಲಿ ಸ್ಮೋಕ್ ಬಾಂಬ್‌ಗಳನ್ನು ಅಡಗಿಸಿಟ್ಟುಕೊಂಡು ಸಂಸತ್ ಭವನದೊಳಗೆ ಪ್ರವೇಶಿಸಿದ್ದರು ಎನ್ನಲಾಗಿದೆ.
ಘಟನೆ ನಡೆದ ತಕ್ಷಣ ಸಂಸದರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಅಂದು ಮೈಸೂರು-ಕೊಡಗು ಸಂಸದರಾಗಿದ್ದ ಪ್ರತಾಪ್ ಸಿಂಹ ಅವರಿಂದ ಮನೋರಂಜನ್ ಸಂಸತ್ ಪ್ರವೇಶದ ಪಾಸ್ ಪಡೆದಿದ್ದ ಎಂಬುದು ಪ್ರಕರಣದಲ್ಲಿ ಪ್ರಮುಖವಾಗಿ ಚರ್ಚೆಯಾಗಿತ್ತು. ಈ ವಿವಾದದ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿತ್ತು.
ಇದೇ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳಾದ ನೀಲಂ ಮತ್ತು ಮಹೇಶ್ ಅವರಿಗೆ ಜಾಮೀನು ದೊರೆತಿದೆ. ಇದೇ ಆಧಾರದ ಮೇಲೆ ತಮಗೂ ಜಾಮೀನು ನೀಡುವಂತೆ ಮನೋರಂಜನ್ ಮತ್ತು ಸಾಗರ್ ಶರ್ಮಾ ಅರ್ಜಿ ಸಲ್ಲಿಸಿದ್ದರು. ಆದರೆ, ಇಬ್ಬರ ಜಾಮೀನು ಅರ್ಜಿಗಳನ್ನು ದೆಹಲಿಯ ಎನ್‌ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

