ಮುಂಬೈ : ಮಹಾರಾಷ್ಟ್ರ ದಲ್ಲಿ ಮಹಾಯುತಿ ಮಿತ್ರಕೂಟದ ಸರ್ಕಾರ ವಿಶ್ವಾಸಮತವನ್ನು ಸೋಮವಾರ ನಿರಾಯಾಸವಾಗಿ ಗೆದ್ದಿದೆ. ಶಿವಸೇನಾ ಶಾಸಕ ಉದಯ್ ಸಾವಂತ್ ಸೇರಿದಂತೆ ನಾಲ್ವರು ಮಂಡಿಸಿದ ವಿಶ್ವಾಸಮತ
ಯಾಚನೆ ಗೊತ್ತುವಳಿಗಳು ಧ್ವನಿಮತದಿಂದ ಅಂಗೀಕಾರವಾಗಿವೆ.
ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಈ ವಿಷಯವನ್ನು ಘೋಷಿಸಿದ ನಂತರ ಸದನದ ಕಲಾಪ ಮುಂದೂಡಲ್ಪಟ್ಟಿತು. ೨೮೮ ಸದಸ್ಯರ ಬಲದ ಈ ವಿಧಾನಸಭೆಯಲ್ಲಿ ಬಿಜೆಪಿ-ಶಿವಸೇನೆಎನ್ಸಿಪಿ ಮಿತ್ರಕೂಟ ೨೩೦ ಸ್ಥಾನಗಳನ್ನು ಹೊಂದಿದೆ.
ಇದೇ ವೇಳೆ ವಿಧಾನಸಭೆಯ 15 ನೇ ಸ್ಪೀಕರ್ ಆಗಿ ಬಿಜೆಪಿಯ ಶಾಸಕ ರಾಹುಲ್ ನಾರ್ವೇಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಈ ಬಗ್ಗೆ ಮತದಾನ ನಡೆಯುವ ಮೊದಲೇ ಅವರು ಅವಿರೋಧವಾಗಿ ಚುನಾಯಿತರಾಗಿದ್ದಾರೆ.
ಪ್ರತಿಪಕ್ಷಗಳ ಮಿತ್ರಕೂಟವಾದ ಮಹಾವಿಕಾಸ್ ಅಘಾಡಿ ಈ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರುವುದರಿಂದ ರಾಹುಲ್ ಆಯ್ಕೆ ಸುಗಮವಾಯಿತು. 1960 ೦ರಲ್ಲಿ ಮಹಾರಾಷ್ಟ್ರ ವಿಧಾನಸಭೆ ರಚನೆಯಾದ ಬಳಿಕ ಅವಿರೋಧವಾಗಿ ಆಯ್ಕೆಯಾದ ಮೊದಲ ಸಭಾಪತಿಯೆಂದರೆ ಬಾಳಾಸಾಹೇಬ್ ಭರಡೆ. ಅವರ ನಂತರ ರಾಹುಲ್ ನಾರ್ವೇಕರ್ ಅಂತಹ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೊಂಡಾಡಿದರು.
ಈ ಹಿಂದಿನ 14ನೇ ವಿಧಾನಸಭೆಯ ಅವಧಿಯಲ್ಲೂ ರಾಹುಲ್ ಎರಡೂವರೆ ವರ್ಷಗಳ ಕಾಲ ಸಭಾಪತಿಯಾಗಿದ್ದರು. ಕೊಲಾಬಾ ಕ್ಷೇತ್ರದಿಂದ ಮರುಆಯ್ಕೆಯಾಗಿದ್ದಾರೆ.