ಮಂಗಳೂರು : ದೇವಸ್ಥಾನಗಳಲ್ಲಿ ದೇವರಿಗೆ ಅರ್ಪಿಸಿದ ಪವಿತ್ರ ಹೂವುಗಳನ್ನು ಸಂಗ್ರಹಿಸಿ, ಅವುಗಳಿಂದ ಸುಗಂಧ ದ್ರವ್ಯ ಹಾಗೂ ಅಗರಬತ್ತಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುವ ಉದ್ದೇಶದಿಂದ ರೂಪಿಸಲಾದ ‘ಉಡುಪಿ ಸುಗಂಧ ಯೋಜನೆ’ಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ ಬ್ಯಾಂಕ್) ವತಿಯಿಂದ ಹೂ ಸಾಗಾಟ ವಾಹನವನ್ನು ಕೊಡುಗೆಯಾಗಿ ನೀಡಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ವಾಹನದ ಕೀ ಹಸ್ತಾಂತರಿಸುವ ಮೂಲಕ ಯೋಜನೆಯ ಕಾರ್ಯಚಟುವಟಿಕೆಗಳಿಗೆ ನೆರವು ನೀಡಲಾಯಿತು. ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಯೋಜನೆಗೆ ವಾಹನದ ಅಗತ್ಯವಿರುವ ಬಗ್ಗೆ ತಿಳಿಸಿದಾಗ ತಕ್ಷಣ ಸ್ಪಂದಿಸಿ ಕೊಡುಗೆ ನೀಡಲು ಒಪ್ಪಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
800ಕ್ಕೂ ಅಧಿಕ ದೇವಸ್ಥಾನಗಳ ಹೂವುಗಳ ಸಂಗ್ರಹ
ಉಡುಪಿ ಜಿಲ್ಲೆಯಲ್ಲಿ 800ಕ್ಕೂ ಅಧಿಕ ದೇವಸ್ಥಾನಗಳಿವೆ. ಈ ದೇವಸ್ಥಾನಗಳಲ್ಲಿ ದೇವರಿಗೆ ಅರ್ಪಿಸುವ ಪವಿತ್ರ ಹೂವುಗಳನ್ನು ಬಳಕೆಯ ನಂತರ ಕಸದಂತೆ ಎಸೆಯುವ ಬದಲಿಗೆ, ಅವುಗಳನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಉದ್ದೇಶವನ್ನು ಯೋಜನೆ ಹೊಂದಿದೆ. ಸಂಗ್ರಹಿಸಿದ ಹೂವುಗಳನ್ನು ಸಂಸ್ಕರಿಸಿ ಸುಗಂಧ ದ್ರವ್ಯ, ಅಗರಬತ್ತಿ ಮತ್ತಿತರ ಉತ್ಪನ್ನಗಳನ್ನು ತಯಾರಿಸುವ ಘಟಕದ ಮೂಲಕ ಹೂವುಗಳಿಗೆ ಮೌಲ್ಯವರ್ಧನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ದೇವಸ್ಥಾನಗಳಿಂದ ಹೂವುಗಳನ್ನು ಸಂಗ್ರಹಿಸಿ ಸಾಗಿಸಲು ವಿಶೇಷ ವಾಹನವನ್ನು ಒದಗಿಸಿರುವುದು ಯೋಜನೆಯ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ.
ಪರಿಸರ ಸ್ನೇಹಿ ಯೋಜನೆಗೆ ಸಹಕಾರ
ಧಾರ್ಮಿಕ ದತ್ತಿ ಇಲಾಖೆ ಹಾಗೂ ಜಿಲ್ಲಾಡಳಿತದ ಪ್ರಸ್ತಾವನೆಯಂತೆ ಎನ್ಜಿಒಗಳ ಸಹಯೋಗದಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಗೆ ಉದ್ಯಮಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಮತ್ತು ನೆರವು ವ್ಯಕ್ತವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದರು.
ದೇವಸ್ಥಾನಗಳ ಹೂವುಗಳನ್ನು ಸಮರ್ಪಕವಾಗಿ ಸಂಗ್ರಹಿಸಿ ಮರುಬಳಕೆ ಮಾಡುವುದರಿಂದ ಹೂವಿನ ತ್ಯಾಜ್ಯವನ್ನು ಕಡಿಮೆ ಮಾಡುವುದರ ಜೊತೆಗೆ, ಅವುಗಳಿಂದ ಉಪಯುಕ್ತ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗಲಿದೆ. ಧಾರ್ಮಿಕ ಭಾವನೆಗೆ ಗೌರವ ನೀಡುವುದರೊಂದಿಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡುವ ಈ ಯೋಜನೆಗೆ ಎಸ್ಸಿಡಿಸಿಸಿ ಬ್ಯಾಂಕ್ನ ವಾಹನ ಕೊಡುಗೆ ಮಹತ್ವದ ನೆರವಾಗಿದೆ.

