Monday, August 3, 2026
Homeಜಿಲ್ಲೆಮಂಗಳೂರು : 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಉಮ್ಮರ್ ನವಾಫ್ ಬಂಧನ.

ಮಂಗಳೂರು : 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಉಮ್ಮರ್ ನವಾಫ್ ಬಂಧನ.

ಮಂಗಳೂರು : ಸುಮಾರು ಏಳು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾಗೂ 30ಕ್ಕೂ ಹೆಚ್ಚು ವಾರಂಟ್‌ಗಳನ್ನು ಎದುರಿಸುತ್ತಿದ್ದ ವಾರಂಟ್ ಆರೋಪಿ ಉಮ್ಮರ್ ನವಾಫ್ (33)ನನ್ನು ಮಂಗಳೂರು ದಕ್ಷಿಣ ಉಪವಿಭಾಗದ ವಿಶೇಷ ಕರ್ತವ್ಯ ತಂಡ ಬಂಧಿಸಿದೆ. ಈತನ ವಿರುದ್ಧ ಉಳ್ಳಾಲ, ಪಣಂಬೂರು ಹಾಗೂ ಬರ್ಕೆ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ಅಪಹರಣ, ದರೋಡೆ, ಸುಲಿಗೆ, ಕಳ್ಳತನ ಸೇರಿದಂತೆ 13ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ಉಳ್ಳಾಲ ತಾಲೂಕಿನ ಮಾರ್ಗತಲೆ ಮೂಲದ ಉಮ್ಮರ್ ನವಾಫ್ ಪ್ರಸ್ತುತ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪ ವಾಸವಾಗಿದ್ದಾನೆ. ನ್ಯಾಯಾಲಯಕ್ಕೆ ಹಲವು ವರ್ಷಗಳಿಂದ ಹಾಜರಾಗದ ಹಿನ್ನೆಲೆ ವಿವಿಧ ಪ್ರಕರಣಗಳಲ್ಲಿ 30ಕ್ಕೂ ಹೆಚ್ಚು ವಾರಂಟ್‌ಗಳು ಜಾರಿಯಾಗಿದ್ದು, ಕೆಲವು ಪ್ರಕರಣಗಳಲ್ಲಿ ಪ್ರೋಕ್ಲಮೇಶನ್ ಕೂಡ ಹೊರಡಿಸಲಾಗಿತ್ತು. ಒಂದು ಪ್ರಕರಣವನ್ನು ನ್ಯಾಯಾಲಯ ಲಾಂಗ್ ಪೆಂಡಿಂಗ್ ಕೇಸ್ (LPC) ಎಂದು ದಾಖಲಿಸಿತ್ತು.

ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ತಂಡವು ಆಗಸ್ಟ್‌ 2ರಂದು ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular