ಮಂಗಳೂರು: ಎಳೆಯ ವಯಸ್ಸಿನಲ್ಲೇ ಅಪರೂಪದ ಪ್ರತಿಭೆಯ ಮೂಲಕ ಗಮನ ಸೆಳೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರದ್ಯಾ ವೈ. ಕುಲಾಲ್ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ ‘IBR ಅಚೀವರ್’ ಗೌರವಕ್ಕೆ ಪಾತ್ರರಾಗಿದ್ದಾರೆ.

ಬಿ.ಸಿ. ರೋಡ್ ಸಮೀಪದ ದಹಿಪಲ್ಲ ನಿವಾಸಿಗಳಾದ ವಿಜಯಲಕ್ಷ್ಮಿ ಮತ್ತು ಯಾದವ ದಂಪತಿಯ ಕಿರಿಯ ಪುತ್ರಿ ಪ್ರದ್ಯಾ, ಎಸ್.ವಿ.ಎಸ್. ನರ್ಸರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೇವಲ 2 ವರ್ಷ 9 ತಿಂಗಳ ವಯಸ್ಸಿನಲ್ಲಿಯೇ ಐದು ಮಂತ್ರಗಳನ್ನು ಪಠಿಸುವುದರ ಜೊತೆಗೆ ಕನ್ನಡ ಮತ್ತು ತುಳು ಭಾಷೆಗಳಲ್ಲಿ ನಾಲ್ಕು ಭಕ್ತಿಗೀತೆಗಳನ್ನು ಹಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
2023ರ ನವೆಂಬರ್ 11ರಂದು ಜನಿಸಿದ ಪ್ರದ್ಯಾ ಅವರ ಈ ಸಾಧನೆಯನ್ನು 2026ರ ಆಗಸ್ಟ್ 18ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದೃಢೀಕರಿಸಿದ್ದು, ಅವರಿಗೆ ‘IBR ಅಚೀವರ್’ ಗೌರವ ಲಭಿಸಿದೆ.
ಪ್ರದ್ಯಾ ಅವರ ಕುಟುಂಬದಲ್ಲಿ ಪ್ರತೀ ಶುಕ್ರವಾರ ಮನೆಯಲ್ಲಿಯೇ ಭಜನೆ ನಡೆಸಲಾಗುತ್ತದೆ. ಅಲ್ಲದೆ, ಪ್ರತೀ ಬುಧವಾರ ಬಿ.ಸಿ. ರೋಡ್ನ ದಹಿಪಲ್ಲ ಸಮೀಪದ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯುವ ಭಜನಾ ಕಾರ್ಯಕ್ರಮದಲ್ಲೂ ಕುಟುಂಬದವರು ಭಾಗವಹಿಸುತ್ತಾರೆ. ಕುಟುಂಬದಲ್ಲಿ ಬೆಳೆಸಿಕೊಂಡಿರುವ ಭಜನಾ ಸಂಪ್ರದಾಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿನ ಆಸಕ್ತಿ ಪ್ರದ್ಯಾ ಅವರ ಮಂತ್ರ ಪಠಣ ಮತ್ತು ಭಕ್ತಿಗೀತೆಗಳ ಗಾಯನಕ್ಕೆ ಪೂರಕವಾಗಿದೆ.
ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮಂತ್ರಗಳನ್ನು ಪಠಿಸಿ, ಎರಡು ಭಾಷೆಗಳಲ್ಲಿ ಭಕ್ತಿಗೀತೆಗಳನ್ನು ಹಾಡುವ ಮೂಲಕ ಸಾಧನೆ ಮಾಡಿರುವ ಪ್ರದ್ಯಾ ಅವರ ಪ್ರತಿಭೆಗೆ ಕುಟುಂಬಸ್ಥರು, ಹಿತೈಷಿಗಳು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ.

