ಮಂಗಳೂರು : ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಸೆಪ್ಟೆಂಬರ್ 6ರಂದು ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಶ್ರೀ ರಾಮಕೃಷ್ಣ ಶಾಲಾ ಮೈದಾನ ಹಾಗೂ ಬಂಟರ ಮಾತೃಸಂಘದ ಆವರಣದಲ್ಲಿ ಅಂತರ್‌ಜಿಲ್ಲಾ ಮಟ್ಟದ ಬಂಟ ಕ್ರೀಡೋತ್ಸವ ಆಯೋಜಿಸಲಾಗಿದೆ ಎಂದು ಡಾ. ಆಶಾ ಜ್ಯೋತಿ ರೈ ಯವರು ತಿಳಿಸಿದ್ದಾರೆ.
ಬಂಟರ ಯಾನೆ ನಾಡವರ ಮಾತೃಸಂಘ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಓಂಕಾರ ನಗರ, ಬಂಟ್ಸ್ ಹಾಸ್ಟೆಲ್, ಮಂಗಳೂರು ಇವರ ಸಹಯೋಗದಲ್ಲಿ ಕ್ರೀಡಾಕೂಟ ನಡೆಯಲಿದೆ.
ಸೆ.6ರಂದು ಬೆಳಗ್ಗೆ 9 ಗಂಟೆಯಿಂದ ಕ್ರೀಡಾಕೂಟ ಆರಂಭವಾಗಲಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಕ್ರೀಡಾಪಟುಗಳು ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
1ರಿಂದ 70 ವರ್ಷದವರೆಗೆ ಅವಕಾಶ
ಕ್ರೀಡಾಕೂಟದಲ್ಲಿ ಒಂದನೇ ತರಗತಿಯಿಂದ 70 ವರ್ಷ ವಯೋಮಾನದವರೆಗಿನ ಬಂಟ ಬಾಂಧವರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ ಹಾಗೂ ವಿವಿಧ ಜಾನಪದ ಕ್ರೀಡೆಗಳು ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಪುರುಷರಿಗೂ ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಇದರೊಂದಿಗೆ ಸ್ಥಳದಲ್ಲೇ ಮನೋರಂಜನಾ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗಿದ್ದು, 3 ವರ್ಷದೊಳಗಿನ ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ ಹಾಗೂ 4ರಿಂದ 6 ವರ್ಷದ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ ನಡೆಯಲಿದೆ.
ಸಾಧಕ ಕ್ರೀಡಾಪಟುಗಳಿಗೆ ಗೌರವ.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ಪ್ರತಿಭಾವಂತ ಕ್ರೀಡಾಪಟುಗಳನ್ನು ಗೌರವಿಸಲಾಗುವುದು. ಬೆಳಗ್ಗಿನಿಂದ ಸಂಜೆಯವರೆಗೆ ನಡೆಯುವ ಕ್ರೀಡಾಕೂಟದ ಸಮಾರೋಪ ಸಮಾರಂಭ ಸಂಜೆ ನಡೆಯಲಿದ್ದು, ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಗುವುದು.
ರಾಜ್ಯ ಅಥವಾ ರಾಷ್ಟ್ರಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಅರ್ಹತೆ ಪಡೆಯುವ ವಿಜೇತ ಕ್ರೀಡಾಪಟುಗಳಿಗೆ ಸಂಘಟನೆಯ ವತಿಯಿಂದ ವಿಶೇಷ ಸಹಕಾರ ಹಾಗೂ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಸದಾಶಿವ ಶೆಟ್ಟಿ, ಜಯಶೀಲಾ ಅದ್ಯಾ ಂತಯ, ಜಗದೀಶ್ ಶೆಟ್ಟಿ ಯವರು ಉಪಸ್ಥಿತರಿದ್ದರು.

