ಮಂಗಳೂರು : ದಕ್ಷಿಣ ಕನ್ನಡ ಸಂಸದ ವಿರುದ್ಧವೇ ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. “ಇಂಥವರು ನಮ್ಮ ಜನಪ್ರತಿನಿಧಿಯಾಗಿರುವುದು ನಮ್ಮ ದುರಂತ” ಎಂದು ಬಿಜೆಪಿ ಮಂಡಲ ಉಪಾಧ್ಯಕ್ಷರಿಂದಲೇ ಅಸಮಾಧಾನ ವ್ಯಕ್ತವಾಗಿದೆ.




ಮೂಲ್ಕಿ-ಮೂಡಬಿದ್ರೆ ಬಿಜೆಪಿ ಉಪಾಧ್ಯಕ್ಷ ಸೂರಜ್ ಜೈನ್ ಸಾಮಾಜಿಕ ಜಾಲತಾಣದಲ್ಲಿ ಸಂಸದ ಬ್ರಿಜೇಶ್ ಚೌಟ ಅವರ ವಿರುದ್ಧ ಅಸಮಾಧಾನದ ಪೋಸ್ಟ್ ಹಂಚಿಕೊಂಡಿದ್ದಾರೆ. ಮೂಡಬಿದಿರೆಯ ಬನ್ನಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಸರಣಿ ಅಪಘಾತಗಳು ನಡೆಯುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಸರ್ವಿಸ್ ರಸ್ತೆ ಇಲ್ಲದಿರುವುದರಿಂದ ಸುಮಾರು 20ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಕೇವಲ ಮೂರು ದಿನಗಳಲ್ಲೇ ನಾಲ್ಕು ಅಪಘಾತಗಳು ಸಂಭವಿಸಿ ಓರ್ವ ಮಹಿಳೆ ಮೃತಪಟ್ಟ ಘಟನೆ ಜನರ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆ ರಸ್ತೆ ಸಮಸ್ಯೆಗೆ ಪರಿಹಾರ ಕೇಳಲು ಬಿಜೆಪಿ ಮುಖಂಡ ಸೂರಜ್ ಜೈನ್ ನೇತೃತ್ವದ ತಂಡ ಸಂಸದರನ್ನು ಭೇಟಿ ಮಾಡಿತ್ತು. ಆದರೆ ಅಧಿಕಾರಿಗಳ ಎದುರೇ ಅವಮಾನಕಾರಿ ರೀತಿಯಲ್ಲಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ಈ ಅವಘಡಗಳಿಗೆ ಹೆದ್ದಾರಿ ಕಾಮಗಾರಿಯೇ ಕಾರಣ ಎಂದು ನೀವು ಹೇಗೆ ಹೇಳುತ್ತೀರಿ?” “ಕಾಮಗಾರಿ ಪೂರ್ಣಗೊಳ್ಳುವವರೆಗೆ ಸರ್ವಿಸ್ ರಸ್ತೆ ಸಾಧ್ಯವಿಲ್ಲ” “2023ರಲ್ಲಿ ಮನವಿ ಕೊಟ್ಟಿದ್ದರೆ, ಕೊಟ್ಟವರ ಬಳಿ ಹೋಗಿ ಕೇಳಿ” “ಜನರ ಪ್ರತಿಭಟನೆಗೆ ನಾನು ಹೆದರೋದಿಲ್ಲ” ಎಂದು ಸಂಸದರು ಉತ್ತರಿಸಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡುವಂತೆ ಕೇಳಿದಾಗ, “ಆ ಕಡೆ ಬಂದಾಗ ಬರುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ. ಈ ಬೆಳವಣಿಗೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಂಸದ ಬ್ರಿಜೇಶ್ ಚೌಟ ವಿರುದ್ಧ ಆಕ್ರೋಶದ ಕಿಚ್ಚು ಮತ್ತಷ್ಟು ಹೆಚ್ಚಾಗಿದೆ.ಒಟ್ಟಿನಲ್ಲಿ ಮೋದಿಯಾ ಹೆಸರಲ್ಲಿ ಗೆದ್ದು ಬಂದ ಬ್ರಿಜೇಶ್ ಚೌಟರಿಗೆ ಇತ್ತಿಚ್ಚಿನ ದಿನಗಳಲ್ಲಿ ಅದಿಕಾರದ ಮಾಡ ಹೆಚ್ಚಾಗಿದೆ ಎಂದು ಸ್ವತಃ ಕಾರ್ಯಕತರೇ ರೊಚ್ಚಿಗೆದಿರುವುದು ಸಂಗಡಿಗರಿಗೆ ದಿಗಿಲು ಬಡಿದಂತಾಗಿದೆ.


