ಮಂಗಳೂರು : ವಾಮಂಜೂರು ಶ್ರೀರಾಮನಗರದ ಶ್ರೀ ರಕ್ತೇಶ್ವರಿ ಹಾಗೂ ಪಂಚದೇವತಾ ಸಾನ್ನಿಧ್ಯದ ಆಶ್ರಯದಲ್ಲಿ ಅಕ್ಟೋಬರ್ 16ರಿಂದ 22ರವರೆಗೆ ನಡೆಯಲಿರುವ ಐದನೇ ವರ್ಷದ ವಾಮಂಜೂರು ಶಾರದಾ ಮಹೋತ್ಸವಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಹಿನ್ನಡೆಯಾಗಿದೆ ಎಂದು ಮಹೋತ್ಸವದ ಆಯೋಜಕರು ತಿಳಿಸಿದ್ದಾರೆ. ಈ ಬೆಳವಣಿಗೆಯ ನಡುವೆಯೇ ಇಂದು ಶಾರದಾ ಮಾತೆಯ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿತು.

ಮಹೋತ್ಸವವನ್ನು ತಡೆಹಿಡಿಯುವಂತೆ ಉಳಾಯಿಬೆಟ್ಟು ಪಟ್ರಕೋಡಿಯ ದೇವದಾಸ್ ಅಂಚನ್ ಯಾನೆ ದಿನೇಶ್ (47), ಗುಣಪಾಲ್ ವಾಮಂಜೂರು (47) ಹಾಗೂ ನವೀನ್ ಶೆಟ್ಟಿ ವಾಮಂಜೂರು (51) ಅವರು ನ್ಯಾಯಾಲಯದ ಮೊರೆ ಹೋಗಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಮಹೋತ್ಸವದ ಆಯೋಜಕರಿಗೆ ಅನುಕೂಲಕರ ಬೆಳವಣಿಗೆ ಕಂಡುಬಂದಿದೆ.
ಈ ಪ್ರಕರಣದಲ್ಲಿ ಮಹೋತ್ಸವದ ಪರವಾಗಿ ಖ್ಯಾತ ನ್ಯಾಯವಾದಿಗಳಾದ ಬಿ. ಅರುಣ್ ಬಂಗೇರ ಹಾಗೂ ಚಿದಾನಂದ ಕೆದಿಲಾಯ ವಾದ ಮಂಡಿಸಿದ್ದರು. ಮತ್ತೊಂದೆಡೆ, ಅರ್ಜಿದಾರರ ಪರವಾಗಿ ಬಿ.ಜಿ. ಫುರ್ಟಾಡೊ ವಾದ ಮಂಡಿಸಿದ್ದರು ಎಂದು ತಿಳಿಸಲಾಗಿದೆ.
ಅಕ್ಟೋಬರ್ 22ರಂದು ಅದ್ಧೂರಿ ವಿಸರ್ಜನಾ ಮೆರವಣಿಗೆ
ವಾಮಂಜೂರು ಶಾರದಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ಅಕ್ಟೋಬರ್ 22ರಂದು ನಡೆಯಲಿದೆ. ಮೆರವಣಿಗೆಯಲ್ಲಿ 10ಕ್ಕೂ ಅಧಿಕ ಟ್ಯಾಬ್ಲೋಗಳು, ಕೇರಳದ ಚೆಂಡೆ ವಾದ್ಯಗಳ ಸದ್ದು ಹಾಗೂ ವರ್ಣರಂಜಿತ ಸ್ತಬ್ಧಚಿತ್ರಗಳು ಮೆರುಗು ನೀಡಲಿವೆ.
ಬೃಹತ್ ಶೋಭಾಯಾತ್ರೆಯೊಂದಿಗೆ ನಡೆಯಲಿರುವ ಈ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಆಯೋಜಕರಿಂದ ಕೃತಜ್ಞತೆ
ಮಹೋತ್ಸವಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಯಲ್ಲಿ ವಾದ ಮಂಡಿಸಿದ ನ್ಯಾಯವಾದಿಗಳಾದ ಬಿ. ಅರುಣ್ ಬಂಗೇರ ಹಾಗೂ ಚಿದಾನಂದ ಕೆದಿಲಾಯ ಅವರಿಗೆ ವಾಮಂಜೂರು ಶ್ರೀರಾಮನಗರದ ಶ್ರೀ ರಕ್ತೇಶ್ವರಿ ಹಾಗೂ ಪಂಚದೇವತಾ ಸಾನ್ನಿಧ್ಯ ಸಮಿತಿಯವರು ಕೃತಜ್ಞತೆ ಸಲ್ಲಿಸಿದ್ದಾರೆ.
ಶಾರದಾ ಮಾತೆಯ ಪ್ರತಿಷ್ಠಾಪನೆ ಸುಸೂತ್ರವಾಗಿ ನೆರವೇರಿರುವುದು ಭಕ್ತರಲ್ಲಿ ಸಂತಸ ಮೂಡಿಸಿದ್ದು, ಮುಂದಿನ ಕಾರ್ಯಕ್ರಮಗಳು ಹಾಗೂ ವಿಸರ್ಜನಾ ಮೆರವಣಿಗೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

