ಮಂಗಳೂರು : ನಗರದ ನಂತೂರಿನಲ್ಲಿರುವ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಮುಂಭಾಗದ ಸಂಪಿಗೆ ಮರ ಇದೀಗ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಅಡ್ಡಿಯಾಗಿದ್ದು, ಮರ ಉಳಿಸಬೇಕೆಂದು ಭಕ್ತರು ಮನವಿ ಮಾಡಿದ್ದಾರೆ.
ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಆರಾಧನೆಗೊಳ್ಳುತ್ತಿರುವ ರಾಹುಗುಳಿಗ ದೈವವು ಈ ಸಂಪಿಗೆ ಮರದಲ್ಲಿ ನೆಲೆಸಿದೆ ಎಂಬುದು ಭಕ್ತರ ನಂಬಿಕೆ. ಫ್ಲೈಓವರ್ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮರ ಕಡಿಯಲು ಮುಂದಾಗಿರುವ ಹಿನ್ನೆಲೆಯಲ್ಲಿ, ಭಕ್ತರು ದೈವದ ಬಳಿ ಪ್ರಾರ್ಥನೆ ಸಲ್ಲಿಸಿದ್ದರು.
ಇತ್ತೀಚೆಗೆ ನಡೆದ ನೇಮೋತ್ಸವದ ಸಂದರ್ಭದಲ್ಲೂ ರಾಹುಗುಳಿಗ ದೈವದ ಆವೇಶವಾಗಿದ್ದು, ಯಾವುದೇ ಕಾರಣಕ್ಕೂ ಸಂಪಿಗೆ ಮರ ಕಡಿಯಬಾರದು ಎಂದು ದೈವವಾಣಿ ನೀಡಲಾಗಿದೆ ಎಂದು ಭಕ್ತರು ತಿಳಿಸಿದ್ದಾರೆ.
ಮರ ಹತ್ತಿದ ದೈವ, ತಾನು ಮರದಲ್ಲೇ ನೆಲೆಸಿರುವುದಾಗಿ ಹಾಗೂ ಗುಡಿ ದೈವಸ್ಥಾನದೊಳಗಿದ್ದರೂ ತನ್ನ ನೆಲೆ ಮರದಲ್ಲೇ ಇದೆ ಎಂದು ಹೇಳಿದೆ ಎನ್ನಲಾಗಿದೆ. ಹೀಗಾಗಿ ದೈವವಾಣಿಯ ಹಿನ್ನೆಲೆಯಲ್ಲಿ ಸಂಪಿಗೆ ಮರವನ್ನು ಉಳಿಸುವಂತೆ ಭಕ್ತರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಮನವಿ ಮಾಡಿದ್ದಾರೆ.
ಮರವನ್ನು ಉಳಿಸಿಕೊಂಡೇ ಹೆದ್ದಾರಿ ಹಾಗೂ ಫ್ಲೈಓವರ್ ಕಾಮಗಾರಿ ನಡೆಸಲು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂಬುದು ಭಕ್ತರ ಒತ್ತಾಯವಾಗಿದೆ.

