Friday, July 31, 2026
Homeಜಿಲ್ಲೆಮಂಗಳೂರು : "ಮಳೆಗಾಲದ ಹಸಿರಿನಲ್ಲಿ ಮಿಂದೇಳಿದ ಕುದುರೆಮುಖ; 2025-26ರಲ್ಲಿ 55 ಸಾವಿರಕ್ಕೂ ಅಧಿಕ ಚಾರಣಿಗರ ಭೇಟಿ",...

ಮಂಗಳೂರು : “ಮಳೆಗಾಲದ ಹಸಿರಿನಲ್ಲಿ ಮಿಂದೇಳಿದ ಕುದುರೆಮುಖ; 2025-26ರಲ್ಲಿ 55 ಸಾವಿರಕ್ಕೂ ಅಧಿಕ ಚಾರಣಿಗರ ಭೇಟಿ”, 5.20 ಕೋಟಿ ಆದಾಯ ಸಂಗ್ರಹ.

ಮಂಗಳೂರು : ಪಶ್ಚಿಮ ಘಟ್ಟದ ಹಚ್ಚಹಸಿರಿನ ನಡುವೆ ಮಳೆಗಾಲದ ಸೊಬಗಿನಲ್ಲಿ ಕಂಗೊಳಿಸುತ್ತಿರುವ ಕುದುರೆಮುಖ ಪ್ರಕೃತಿ ಪ್ರಿಯರು ಹಾಗೂ ಸಾಹಸಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಮೋಡಗಳ ಹೊದಿಕೆ, ಜಲಪಾತಗಳು, ಝರಿ ತೊರೆಗಳು, ಹುಲ್ಲುಗಾವಲು ಮತ್ತು ಶೋಲಾ ಅರಣ್ಯಗಳ ರಮಣೀಯ ದೃಶ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

Oplus_131072
Oplus_131072
Oplus_131072

ಅರಣ್ಯ ಇಲಾಖೆ ಮಾಹಿತಿ ಪ್ರಕಾರ, 2025-26ನೇ ಸಾಲಿನಲ್ಲಿ ಗಂಗಡಿಕಲ್, ಕುರಿಂಜಾಲ್ ಹಾಗೂ ಕುದುರೆಮುಖ ಟ್ರೆಕ್ಕಿಂಗ್ ಮಾರ್ಗಗಳಿಗೆ 55 ಸಾವಿರಕ್ಕೂ ಅಧಿಕ ಚಾರಣಿಗರು ಭೇಟಿ ನೀಡಿದ್ದಾರೆ. ಗಂಗಡಿಕಲ್‌ಗೆ 10,096, ಕುರಿಂಜಾಲ್‌ಗೆ 13,422 ಹಾಗೂ ಕುದುರೆಮುಖ ಶಿಖರಕ್ಕೆ 33,348 ಮಂದಿ ಭೇಟಿ ನೀಡಿದ್ದು, ಚಾರಣ ಶುಲ್ಕದಿಂದ ಸುಮಾರು ₹5.20 ಕೋಟಿ ಆದಾಯ ಸಂಗ್ರಹವಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ಹಾಗೂ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳಲ್ಲಿ 35 ಆಂಟಿ ಪೋಚಿಂಗ್ ಕ್ಯಾಂಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, 200ಕ್ಕೂ ಹೆಚ್ಚು ಸಿಬ್ಬಂದಿ ವನ್ಯಜೀವಿ ಸಂರಕ್ಷಣೆ, ಅರಣ್ಯ ರಕ್ಷಣೆ ಹಾಗೂ ಚಾರಣಿಗರ ಸುರಕ್ಷತೆಯ ಹೊಣೆ ಹೊತ್ತಿದ್ದಾರೆ.

ದಟ್ಟ ಅರಣ್ಯ ಪ್ರದೇಶದಲ್ಲಿ ನೆಟ್‌ವರ್ಕ್ ಮತ್ತು ವಿದ್ಯುತ್ ಸಂಪರ್ಕದ ಕೊರತೆ, ಉಂಬಳಗಳ ಹಾವಳಿ, ಕಾಡುಪ್ರಾಣಿಗಳ ಆತಂಕದ ನಡುವೆಯೂ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಇಲಾಖೆಯಲ್ಲಿ ಶೇ.42ರಷ್ಟು ಕ್ಷೇತ್ರ ಸಿಬ್ಬಂದಿ ಕೊರತೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಚಾರಣಕ್ಕೆ ಆನ್‌ಲೈನ್ ಮುಂಗಡ ಬುಕ್ಕಿಂಗ್ ಕಡ್ಡಾಯವಾಗಿದ್ದು, ದಿನಕ್ಕೆ 300 ಚಾರಣಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಪ್ರತಿ 10 ಚಾರಣಿಗರಿಗೆ ಒಬ್ಬ ಸ್ಥಳೀಯ ಗೈಡ್ ನಿಯೋಜಿಸಲಾಗುತ್ತದೆ. ಭಾರೀ ಮಳೆ ಅಥವಾ ಅರಣ್ಯ ಬೆಂಕಿಯ ಅಪಾಯದ ಸಂದರ್ಭದಲ್ಲಿ ಚಾರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.

ಇತ್ತೀಚಿನ ವನ್ಯಜೀವಿ ಸಮೀಕ್ಷೆಯಲ್ಲಿ ಕುದುರೆಮುಖ ವ್ಯಾಪ್ತಿಯಲ್ಲಿ ನಾಲ್ಕು ಹುಲಿಗಳ ಉಪಸ್ಥಿತಿ ದಾಖಲಾಗಿದ್ದು, ಕಾಡಾನೆ, ಕಾಡುಕೋಣ, ಕಾಡುನಾಯಿ ಸೇರಿದಂತೆ ಹಲವು ವನ್ಯಜೀವಿಗಳು ಹಾಗೂ 101 ಜಾತಿಯ ಪಕ್ಷಿಗಳು ಇಲ್ಲಿ ನೆಲೆಸಿವೆ. ಅರಣ್ಯ ಇಲಾಖೆ ಪರಿಸರ ಸಂರಕ್ಷಣೆ ಮತ್ತು ಸುರಕ್ಷಿತ ಚಾರಣಕ್ಕೆ ಆದ್ಯತೆ ನೀಡುತ್ತಿದ್ದು, ಕುದುರೆಮುಖದ ನೈಸರ್ಗಿಕ ಸೌಂದರ್ಯವನ್ನು ಮುಂದಿನ ಪೀಳಿಗೆಗೂ ಉಳಿಸುವ ನಿಟ್ಟಿನಲ್ಲಿ ಪ್ರವಾಸಿಗರು ಜವಾಬ್ದಾರಿಯುತವಾಗಿ ವರ್ತಿಸುವಂತೆ ಮನವಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular