Wednesday, March 18, 2026
Flats for sale
Homeಜಿಲ್ಲೆಮಂಗಳೂರು : “ಬೋಳೂರಿನಲ್ಲಿ ದೈವನರ್ತನ ಮಾಡಿದ್ದು ಕ್ರೈಸ್ತ ಅಲ್ಲ, ಆತ ಹಿಂದೂ, ಪಂಬದ ಸಮಾಜಕ್ಕೆ ಸೇರಿದವನು“...

ಮಂಗಳೂರು : “ಬೋಳೂರಿನಲ್ಲಿ ದೈವನರ್ತನ ಮಾಡಿದ್ದು ಕ್ರೈಸ್ತ ಅಲ್ಲ, ಆತ ಹಿಂದೂ, ಪಂಬದ ಸಮಾಜಕ್ಕೆ ಸೇರಿದವನು“ ; ದೈವನರ್ತಕ ಸೂರಜ್ ಚಿಪ್ಪಾರು.

ಮಂಗಳೂರು : “ಕಳೆದ ಮಾರ್ಚ್ 13 ರಂದು ಸುದ್ದಿಗೋಷ್ಠಿ ನಡೆಸಿದ್ದ ಡಾ.ರತಿ ಅವರು ಕರಾವಳಿಯಲ್ಲಿ ದೈವ ನರ್ತನ ಸೇವೆಯನ್ನು ಪಂಬದ, ಪಾಣಾರ ಸುಮಾರು 16 ಜಾತಿಗಳವರು ಮಾಡಬೇಕು ಆದರೆ ಮಂಗಳೂರಿನ ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ ಯುವಕನಿಂದ ನರ್ತನ ಸೇವೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅವರ ಈ ಆರೋಪಕ್ಕೆ ಬೇಕಾದ ಜಾತಿ ಪ್ರಮಾಣಪತ್ರ ನಮ್ಮಲ್ಲಿದ್ದು ನರ್ತನ ಸೇವೆ ಮಾಡಿರುವ ಸುಶಾಂತ್ ಬಂಗೇರ ಒಬ್ಬ ಹಿಂದೂ ಆಗಿದ್ದು ಪಂಬದ ಸಮಾಜಕ್ಕೆ ಸೇರಿದವನು“ ಎಂದು ದೈವನರ್ತಕ ಸೂರಜ್ ಚಿಪ್ಪಾರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

”ನಮ್ಮದೇ ಪಂಬದ ಸಮುದಾಯದ ಗಣೇಶ್ ಪದವಿನಂಗಡಿ ಎಂಬವರು ಮದುವೆ ಆಗಿರುವುದು ಕ್ರಿಶ್ಚನ್ ಮಹಿಳೆಯನ್ನು ಎಂಬುದು ಸತ್ಯ. ಮಾತ್ರವಲ್ಲದೆ ಯಾವಾಗ ಕ್ರಿಶ್ಚಿಯನ್ ಮಹಿಳೆ ಗಣೇಶ್ ಎಂಬವರನ್ನು ಮದುವೆಯಾದರೂ ಆವಾಗಲೇ ನಮ್ಮ ಹಿಂದೂ ಸಂಪ್ರದಾಯಕ್ಕೆ ಹಾಗೂ ಪಂಬದ ಜಾತಿಯ ನೀತಿ ನಿಯಮಗಳನ್ನು ಪಾಲಿಸಿಕೊಂಡು ಬಂದಿರುತ್ತಾರೆ ಯಾವಾಗ ಒಂದು ಹೆಣ್ಣು ತನ್ನ ಮೂಲ ಧರ್ಮವನ್ನೇ ಬಿಟ್ಟು ಮತ್ತೊಂದು ಧರ್ಮಕ್ಕೆ ಬಂದು ಇಲ್ಲಿನ ಆಚಾರ ವಿಚಾರ ಪದ್ದತಿಗಳನ್ನು ಅನುಸರಿಸುತ್ತಾರೆ ಅವರು ನಮ್ಮವರಾಗುತ್ತಾರೆ ಮಾತ್ರವಲ್ಲದೆ ಹೆಣ್ಣನ್ನು ಈ ವಿಚಾರದಲ್ಲಿ ದೂಷಣೆ ಮಾಡುವುದು ಅತಿ ದೊಡ್ಡ ಅನ್ಯಾಯವಾಗುತ್ತದೆ. ಹಾಗೆಯೇ ಪಂಬದ ಜನಾಂಗದ ಗಣೇಶ ಅವರು ಹಿಂದು ಸಂಪ್ರದಾಯದಂತೆ ಮದುವೆಯಾಗಿ ಅದರ ನಂತರ ಸುಶಾಂತ್ ಪಂಬದರನ್ನು ಮಗುವಾಗಿ ಪಡೆಯುತ್ತಾರೆ. ಅದರಂತೆ ಕಾನೂನು ಪ್ರಕಾರ ಜಾತಿ ಪ್ರಮಾಣ ಪತ್ರ ಹಾಗೂ ಎಲ್ಲಾ ದಾಖಲೆಗಳನ್ನು ಈಗಾಗಲೇ ಮಾಡಿಕೊಂಡಿರುತ್ತಾರೆ“ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಚಿಪ್ಪಾರು ಗಣೇಶ್ ಪಂಬದ ಮಾತಾಡಿ, ”ಇಲ್ಲಿ ಎಲ್ಲಿಯೂ ಪಂಬದ ಜನಾಂಗದ ವೃತ್ತಿ ಗೌರವ ಕಳೆಯುವ ಕಾರ್ಯವಾಗಲಿ ಅಥವಾ ದೈವಾರಾಧನೆಗೆ ಅಪಚಾರ ಮಾಡುವ ಕೆಲಸವಾಗಲಿ ಆಗಲಿಲ್ಲ. ಅಂದು ಮಂಗಳೂರಿನ ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೇವಕ್ಕೆ ನರ್ತಕ ಸೇವೆಯನ್ನು ಶ್ರದ್ದಾಭಕ್ತಿಯಿಂದ ಕಿಂಚಿತ್ತು ಲೋಪದೋಷಗಳು ಬಾರದಂತೆ ದೈವೀ ಅಪ್ಪಣೆ ಯಂತೆ ನಡೆಸಲಾಗಿದೆ ಇದರಿಂದ ಮಾಡಿಸಿದವರಿಗಾಗಲಿ. ಊರಿಗಾಗಲಿ, ನಮಗಾಗಲಿ ಯಾವುದೇ ತೊಂದರೆಗಳು ಬಾರದೆ ಅತ್ಯುತ್ತಮವಾಗಿ ನಡೆದಿದೆ. ನಾನು ಕಳೆದ 31 ವರ್ಷಗಳಿಂದ ಕುಂಬ್ಳೆ ಸೀಮೆ, ವಿಟ್ಲ ಸೀಮೆ, ಕೋಳಿಯೂರು ಸೀಮೆ, ಮಂಜೇಶ್ವರ ಮಾಗಣೆ, ಕುರ್ನಾಡು ಮಾಗಣೆ, ಹರೇಕಳ ಪಾವೂರು ಮಾಗಣೆ ಹೀಗೆ ಹತ್ತು ಹಲವು ಮಾಗಣೆಗಳಲ್ಲಿ ದೈವ ನರ್ತನೆ ಸೇವೆಯನ್ನು ನಿಷ್ಠೆಯಿಂದ ನಮ್ಮ ಜನಾಂಗಕ್ಕೆ ಮತ್ತು ಭಕ್ತ ಸಮುದಾಯದವರಿಗೆ ಧಕ್ಕೆ ಬಾರದ ಹಾಗೆ ನಡೆಸಿಕೊಂಡು ಬಂದಿರುವೆನು. ಇದರಲ್ಲಿ ಸರಿ ತಪ್ಪುಗಳ ಬಗ್ಗೆ ತಿಳಿದುಕೊಂಡಿರುವೆನು ಮಾತ್ರವಲ್ಲದೆ ಕಾಸರಗೋಡು, ದಕ್ಷಿಣ ಕನ್ನಡ ಅವಿಭಜಿತ ಜಿಲ್ಲೆಯಲ್ಲಿ ಭಕ್ತಿಯಿಂದ ಯಾರೆಲ್ಲ ನನ್ನನ್ನು ಆಹ್ವಾನಿಸುತ್ತಾರೋ ಅವರಿಗೆಲ್ಲ ಖಂಡಿತವಾಗಿಯೂ ನನ್ನ ಸೇವೆಯನ್ನು ಮಾಡಲು ಸಿದ್ಧನಾಗಿದ್ದೇನೆ. ಮಾತ್ರವಲ್ಲದೆ ಮುಂದಕ್ಕೂ ಯಾರೆಲ್ಲ ಕರೆಯುತ್ತಾರೋ ಅಲ್ಲಿಗೆ ಸೇವೆ ಸಲ್ಲಿಸಲು ಹೋಗುತ್ತೇನೆ“ ಎಂದರು.

ದೈವನರ್ತಕ ಸುಶಾಂತ್ ಬಂಗೇರ ಮಾತಾಡಿ, ”ನನ್ನನ್ನು ಕ್ರೈಸ್ತ ಧರ್ಮಕ್ಕೆ ಸೇರಿದವನು ಎಂದು ಅವಮಾನ ಮಾಡಿದ್ದಾರೆ. ಅವರು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಅವರ ವೈಯಕ್ತಿಕ ಲಾಭಕ್ಕಾಗಿ ನನ್ನ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಅವರಿಂದ ನನಗೆ ಈ ಪರಿಸ್ಥಿತಿ ಒದಗಿಬಂದಿದೆ. ದೈವನರ್ತನ ಮಾಡಲು ಕಷ್ಟವಾಗುತ್ತಿದೆ“ ಎಂದರು. ಪತ್ರಿಕಾಗೋಷ್ಟಿಯಲ್ಲಿ ಗಣೇಶ್ ಕಜೆ, ಕಮಲಾಕ್ಷ ಪಂಬದ ಗಂಧಕಾಡು, ಸವಿತಾ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular