ಮಂಗಳೂರು : ಬಂಟರ ಸಂಘ ಕಾವೂರು ಮಹಿಳಾ ವಿಭಾಗದ ವತಿಯಿಂದ ಕಾವೂರಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ‘ಆಟಿಡೊಂಜಿ ದಿನ’ ಸಮಾರಂಭ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಸಹಾಯಕ ಪ್ರಾಧ್ಯಾಪಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಮಾತನಾಡಿ, ಹಿರಿಯರ ಜೀವನ ಪದ್ಧತಿ, ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ, ಆರೋಗ್ಯ ಕಾಳಜಿ ಹಾಗೂ ಪ್ರಕೃತಿ ಪ್ರೇಮವನ್ನು ಇಂದಿನ ಯುವಪೀಳಿಗೆ ಉಳಿಸಿ ಬೆಳೆಸಬೇಕು ಎಂದರು.
ಹಿರಿಯರು ಮಳೆಗಾಲಕ್ಕೆ ಅಗತ್ಯವಿರುವ ವಸ್ತುಗಳನ್ನು ಮುಂಗಡವಾಗಿ ಸಂಗ್ರಹಿಸಿ, ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಜೀವನ ನಡೆಸುತ್ತಿದ್ದರು. ಅಂದಿನ ಸಾಂಪ್ರದಾಯಿಕ ಆಹಾರ ಪದ್ಧತಿಯೇ ಅವರ ಆರೋಗ್ಯಕರ ಹಾಗೂ ದೀರ್ಘಾಯುಷ್ಯದ ಪ್ರಮುಖ ಕಾರಣವಾಗಿತ್ತು ಎಂದು ಅವರು ಹೇಳಿದರು.
ಮುಖ್ಯ ಅತಿಥಿ ವಿಜಯಲಕ್ಷ್ಮೀ ಎಂ. ಮಲ್ಲಿ ಮಾತನಾಡಿ, ತುಳುನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯ ಉಳಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಹಿರಿಯರ ಜೀವನ ಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯ ಎಂದರು.
ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್ ಆಟಿಡೊಂಜಿ ಕೂಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಏಷಿಯಾ ಇಂಟೆಕ್ ನ್ಯಾಷನಲ್ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ಪಡೆದ ಸುಖಲತಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಚೆನ್ನೆದ ಮಣೆ ಸೇರಿದಂತೆ ತುಳುವರ ಸಾಂಪ್ರದಾಯಿಕ ಗೊಬ್ಬುಗಳು, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಿಂದಿನ ಕಾಲದ ಆರೋಗ್ಯಕರ ಆಹಾರ ಪದ್ಧತಿಗಳ ಪ್ರದರ್ಶನ ನಡೆಯಿತು.
ಶ್ರೀಮತಿ ಹರುಷ ಎಸ್. ಶೆಟ್ಟಿ ಹಾಗೂ ಹರಿಣಿ ಭಂಡಾರಿ ಪ್ರಾರ್ಥನೆ ನೆರವೇರಿಸಿದರು. ಸುಜಯ ಎಸ್. ಶೆಟ್ಟಿ ಸ್ವಾಗತಿಸಿದರು. ರೇಖಾ ವಿ. ಶೆಟ್ಟಿ ವಂದಿಸಿದರು. ಗೀತಾ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

