Sunday, May 24, 2026
Flats for sale
Homeಜಿಲ್ಲೆಮಂಗಳೂರು ; ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ರೈತನ ರಕ್ಷಣೆ : ಪಣಂಬೂರು ಪೊಲೀಸರ...

ಮಂಗಳೂರು ; ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ರೈತನ ರಕ್ಷಣೆ : ಪಣಂಬೂರು ಪೊಲೀಸರ ಸಮಯಪ್ರಜ್ಞೆಗೆ ಮೆಚ್ಚುಗೆ.

ಮಂಗಳೂರು : ಆತ್ಮಹತ್ಯೆ ಮಾಡಲು ಫಲ್ಗುಣಿ ನದಿಗೆ ಹಾರಲು ಯತ್ನಿಸಿದ್ದ ಹಾಸನ ಮೂಲದ ಕೃಷಿಕನೊಬ್ಬನನ್ನು ಪಣಂಬೂರು ಪೊಲೀಸರು ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಮೇ 22ರಂದು ಸಂಜೆ ನಡೆದಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಸಮೀಪದ ಗ್ರಾಮದ ನಿವಾಸಿಯಾಗಿರುವ ವ್ಯಕ್ತಿ ಆರೋಗ್ಯ ಹಾಗೂ ಹಣಕಾಸಿನ ಸಮಸ್ಯೆಯಿಂದ ಮನೆಯಿಂದ ಹೊರಟು ಮಂಗಳೂರಿಗೆ ಬಂದಿದ್ದಾನೆ. ಮೊಬೈಲ್ ಸಂಪರ್ಕದಲ್ಲಿದ್ದ ಆತ, ಮನೆವರಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರಿಂದ ಆತಂಕಗೊಂಡ ಸಂಬಂಧಿಕರು ನಿವೃತ್ತ ಪೊಲೀಸ್ ಅಧಿಕಾರಿಯ ಮೂಲಕ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ಅವರನ್ನು ಸಂಪರ್ಕಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪೊಲೀಸ್ ಕಮೀಷನರ್ ಕಚೇರಿಯ ತಾಂತ್ರಿಕ ಘಟಕದ ಸಹಾಯದಿಂದ ವ್ಯಕ್ತಿಯ ಹುಡುಕಾಟ ಆರಂಭಿಸಿದರು. ಮೊಬೈಲ್ ಮೂಲಕ ಸಂಪರ್ಕಿಸಿ ಕೌನ್ಸಿಲಿಂಗ್ ನಡೆಸಿದರೂ ಆತ ಸ್ಪಂದಿಸಿರಲಿಲ್ಲ. ಬಳಿಕ ಸುಮಾರು ಒಂದೂವರೆ ಗಂಟೆಗಳ ಶೋಧ ಕಾರ್ಯದ ನಂತರ ಸಂಜೆ 7 ಗಂಟೆ ಸುಮಾರಿಗೆ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ರಕ್ಷಿಸಲಾಯಿತು.

ನಂತರ ಅವರನ್ನು ಠಾಣೆಗೆ ಕರೆತಂದು ಆಹಾರ, ನೀರು ನೀಡಿ ಕೌನ್ಸಿಲಿಂಗ್ ನಡೆಸಿ, ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂಬ ಅರಿವು ಮೂಡಿಸಿ ಸಂಬಂಧಿಕರ ಜೊತೆ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಯಿತು.
ಪಣಂಬೂರು ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್, ಸಬ್ ಇನ್ಸ್‌ಪೆಕ್ಟರ್ ಜ್ಞಾನಶೇಖರ್, ಎಎಸ್ಐ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿಗಳಾದ ಸುರೇಂದ್ರ, ದೀಪಕ್, ಇಮ್ತಿಯಾಝ್, ರಾಕೇಶ್, ಫಕ್ಕಿರೇಶ್, ಶರಣ ಬಸವ, ಅನ್ವರ್, ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular