Sunday, March 16, 2025
Flats for sale
Homeಜಿಲ್ಲೆಮಂಗಳೂರು ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ನಿಂದ ಮೂವರು ಹೊಸ ಅಭ್ಯರ್ಥಿ.

ಮಂಗಳೂರು ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ನಿಂದ ಮೂವರು ಹೊಸ ಅಭ್ಯರ್ಥಿ.

ಮಂಗಳೂರು ; 124 ಕ್ಷೇತ್ರಗಳಿಗೆ ಟಿಕೇಟ್ ಘೋಷಣೆ ಮಾಡಿರೋ ಕಾಂಗ್ರೆಸ್​ , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಸುಳ್ಯ, ಮೂಡಬಿದ್ರೆ, ಬೆಳ್ತಂಗಡಿ ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳಾಗಿ, ಜಿ. ಕೃಷ್ಣಪ್ಪ, ಮಿಥುನ್ ರೈ, ಹಾಗೂ ರಕ್ಷಿತ್​ ಶಿವರಾಮ್ ಅವರಿಗೆ ಟಿಕೇಟ್ ನೀಡಿದೆ. ಬಂಟ್ವಾಳ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರಗಳಿಗೆ ರಮಾನಾಥ ರೈ ಹಾಗೂ ಯು.ಟಿ. ಖಾದರ್ ಅವರಿಗೆ ಟಿಕೇಟ್ ನೀಡಿದೆ. ಟಿಕೇಟ್​ಗಾಗಿ ತೀವೃ ಪೈಪೋಟಿ ಇರೋ ಪುತ್ತೂರು, ಮಂಗಳೂರು ಉತ್ತರ, ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಘೋಷಣೆ ಆಗಿಲ್ಲ.
ಸುಳ್ಯ ಮೀಸಲು ಕ್ಷೇತ್ರಕ್ಕೆ ಉದ್ಯಮಿ ಹಾಗೂ ಕಳೆದ ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣಪ್ಪ ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ರು. ಸುಳ್ಯ ಮೀಸಲು ಕ್ಷೇತ್ರಕ್ಕೆ ಆರು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ರು, ಪ್ರಭಲ ಪೈಪೋಟಿ ಇದ್ದಿದ್ದು ಸುಳ್ಯ ಕ್ಷೇತ್ರದ ಕಡಬ ಬ್ಲಾಕ ಕಾಂಗ್ರೆಸ್​ ಅದ್ಯಕ್ಷ ಹಾಗೂ ಕೆಪಿಸಿಸಿ ಸಂಯೋಜಕರಾಗಿ ಕೆಲಸ ನಿರ್ವಹಿಸ್ತಾ ಇದ್ದ ಹೆಚ್.ಎಂ. ನಂದ ಕುಮಾರ್ ಹಾಗೂ ಜಿ ಕೃಷ್ಣಪ್ಪ ನಡುವೆ. ಇಬ್ಬರೂ ಕೂಡಾ ಟಿಕೇಟ್​ ಸಿಗುವ ನಿರೀಕ್ಷೆಯಲ್ಲಿದ್ದು, ಈ ಬಾರಿ ಕಳೆದ ಮೂರು ದಶಕದಿಂದ ಕೈ ತಪ್ಪಿರೋ ಸುಳ್ಯ ಕ್ಷೇತ್ರವನ್ನು ಮತ್ತೆ ಪಡೆಯುವ ವಿಶ್ವಾಸ ಹೊಂದಿದ್ದರು. ಟಿಕೇಟ್ ಯಾರಿಗೆ ಸಿಕ್ಕಿದರೂ ಜೊತೆಯಾಗಿ ಕೆಲಸ ಮಾಡುವ ಛಲ ಇಟ್ಟು ಕ್ಷೇತ್ರದಲ್ಲಿ ಸಾಕಷ್ಟು ಓಡಾಟ ನಡೆಸಿದ್ರು. ಇಂದು ಮೊದಲ ಹಂತದ ಟಿಕೇಟ್ ಘೋಷಣೆಯಾಗಿದ್ದು, ಜಿ . ಕೃಷ್ಣಪ್ಪ ಅವರಿಗೆ ಟಿಕೇಟ್ ಒಲಿದಿದೆ.

ಇನ್ನು ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಚುನಾವಣೆಯಲ್ಲೇ ಮುಂದಿನ ಅಭ್ಯರ್ಥಿ ಕಾಂಗ್ರೆಸ್ ಯುವ ನಾಯಕ ಹಾಗೂ ಡಿಕೆಶಿ ಆಪ್ತ ಮಿಥುನ್ ರೈ ಅವರಿಗೆ ಟಿಕೇಟ್ ಅನ್ನೋ ಮಾತು ಚಾಲ್ತಿಯಲ್ಲಿತ್ತು. ಮಾಜಿ ಶಾಸಕ ಅಭಯ ಚಂದ್ರ ಜೈಜ್ ಕೂಡಾ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡದೆ ಮಿಥುನ್ ರೈ ಅವರನ್ನು ಬೆಂಬಲಿಸುವುದಾಗಿ ಹೇಳಿದ್ರು. ಹೀಗಾಗಿ ಕಳೆದ ಐದು ವರ್ಷಗಳಿಂದ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರೋ ಮಿಥುನ್ ರೈ ಗೆ ಟಿಕೇಟ್​ ಘೋಷಣೆಯಾಗಿದೆ.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಟಿಕೇಟ್ ವಿಚಾರದಲ್ಲಿ ಸ್ಥಳಿಯ ಕಾಂಗ್ರೆಸ್​ ನಾಯರಲ್ಲಿ ಸಾಕಷ್ಟು ಪೈಪೋಟಿ ಹಾಗೂ ವಿರೋಧ ವ್ಯಕ್ತವಾಗಿತ್ತು. ಈ ಬಾರಿ ಚುನಾವಣೆಯಿಂದ ಹಿಂದೆ ಸರಿದಿರೋ ಮಾಜಿ ಶಾಸಕ ವಸಂತ ಬಂಗೇರ ಅವರ ಬದಲಿಗೆ ಮಾಜಿ ಶಾಸಕ ಗಂಗಾಧರ ಗೌಡ ಅವರಿಗೆ ಟಿಕೇಟ್ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದ್ರೆ ಕಳೆದ ಐದು ವರ್ಷಗಳಿಂದ ಬೆಳ್ತಂಗಡಿ ಕ್ಷೇತ್ರದಲ್ಲಿ ಓಡಾಡಿ ಯುವರನ್ನು ಸಂಘಟಿಸುವ ಮೂಲಕ ಟಿಕೇಟ್​ ಆಕಾಂಕ್ಷಿಯಾಗಿದ್ದು ರಕ್ಷಿತ್ ಶಿವರಾಂ. ಇವರು ನಿವೃತ್ತ ಐಪಿಎಸ್ ಅಧಿಕಾರಿ ಬಿ.ಶಿವರಾಂ ಅವರ ಪುತ್ರ, ಹಾಗೂ ಬಿ.ಕೆ . ಹರಿಪ್ರಾಸಾದ್ ಅವರ ಸೋದರ ಸಂಬಂದಿ. ರಕ್ಷಿತ್ ಶಿವರಾಂ ಅವರಿಗೆ ಟಿಕೇಟ್ ನೀಡಬಾರದು ಅನ್ನೋ ಕಾರಣಕ್ಕೆ ಸಾಕಷ್ಟು ಪ್ರಯತ್ನಗಳು ಬೆಳ್ತಗಂಡಿ ಕಾಂಗ್ರೆಸ್ ವಲಯದಲ್ಲೇ ನಡೆದಿತ್ತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ರೂ ಪಕ್ಷದ ವೇದಿಕೆಯಲ್ಲೂ ರಕ್ಷಿತ್ ಶಿವರಾಂ ಅವರನ್ನೂ ದೂರ ಇರಿಸಲಾಗಿತ್ತು. ಆದ್ರೆ ರಕ್ಷಿತ್ ಶಿವರಾಂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ರು. ಇದೀಗ ರಕ್ಷಿತ್ ಶಿವರಾಂ ಅವರಿಗೆ ಟಿಕೇಟ್ ನೀಡಲಾಗಿದ್ದು, ಮುಂದೆ ಪಕ್ಷದ ಸ್ಥಳಿಯ ನಾಯಕರು ಹೇಗೆ ಬೆಂಬಲ ನೀಡ್ತಾರೆ ಅನ್ನೋದು ಕಾದು ನೋಡಬೇಕಿದೆ.

ಬಂಟ್ವಾಳದಲ್ಲಿ ರಮಾನಾಥ ರೈ ಅವರಿಗೆ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಯು.ಟಿ.ಖಾದರ್ ಅವರಿಗೆ ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಈ ಬಾರಿ ಟಿಕೇಟ್ ಇಬ್ಬರಿಗೂ ಖಚಿತವಾಗಿತ್ತು. ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಸದ್ಯ 5 ವಿಧಾನ ಸಭಾ ಕ್ಷೇತ್ರಗಳ ಟಿಕೇಟ್ ಘೋಷಣೆಯಾಗಿದೆ . ಉಳಿದಿರೋ 3 ವಿಧಾನ ಸಭಾ ಕ್ಷೇತ್ರಗಳು ಕಾಂಗ್ರೆಸ್​ಗೆ ಕಗ್ಗಂಟಾಗಿರೋ ಕ್ಷೇತ್ರಗಳು. ಮಂಗಳೂರು ಉತ್ತರದಲ್ಲಿ ಇನಾಯತ್ ಅಲಿ ಹಾಗೂ ಮಾಜಿ ಶಾಸಕ ಮೊಯಿದಿನ್ ಬಾವ ನಡುವೆ ಟಿಕೇಟ್​ಗಾಗಿ ತೀವೃ ಪೈಪೊಟಿ ನಡೆದಿದೆ. ಅಲಿ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಬ್ಯಾಟ್ ಬೀಸಿದ್ರೆ ಇನಾಯತ್ ಅಲಿ ಪರ ಡಿಕೆಶಿ ಒಲವು ಹೊಂದಿದ್ದಾರೆ. ಇದೇ ರೀತಿ ಮಂಗಳೂರು ದಕ್ಷಿಣದಲ್ಲೂ ಮಾಜಿ ಶಾಸಕ ಲೋಬೋ ಅವರ ಪರ ಡಿಕೆಶಿ ಒಲವು ಹೊಂದಿದ್ರೆ, ಬೆಂಬಲಿಗ ಐವಾನ್ ಡಿಸೋಜಾ ಅವರ ಪರ ಮಾಜಿ ಸಿಎಂ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ. ಇನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಕುತಂಳಾ ಶೆಟ್ಟ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಹಾಗೂ ಇತ್ತೀಚೆಗಷ್ಟೇ ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿರೋ ಉದ್ಯಮಿ ಅಶೋಕ್ ರೈ ಅವರ ನಡುವೆ ತೀವೃ ಪೈಪೋಟಿ ಇದೆ. ಉದ್ಯಮಿ ಅಶೋಕ್ ರೈ ಅವರಿಗೆ ಟಿಕೇಟ್ ನೀಡುವ ಭರವಸೆಯೊಂದಿಗೆ ಅವರನ್ನು ಪಕ್ಷದ ಅದ್ಯಕ್ಷ ಡಿಕೆಶಿ ಪಕ್ಷಕ್ಕೆ ಸೇರಿಸಿಕೊಂಡಿದ್ರು. ಈ ವಿಚಾರವಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್​ನಲ್ಲೇ ಅಪಸ್ವರ ಎದ್ದಿದ್ದು, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಆಪ್ತನಿಗೆ ಯಾವುದೇ ಕಾರಣಕ್ಕೂ ಟಿಕೇಟ್ ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ರು. ಮತ್ತೊಂದು ಕಡೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪಕ್ಷಕ್ಕೆ ದುಡಿದಿರುವ ಹೇಮನಾಥ ಶೆಟ್ಟಿ ಹಲವು ಬಾರಿ ಟಿಕೇಟ್ ವಂಚಿತರಾಗಿದ್ದಾರೆ ಹೀಗಾಗಿ ಅವರಿಗೇ ಟಿಕೇಟ ನೀಡಬೇಕು ಅನ್ನೋ ಒತ್ತಾಯವನ್ನು ಕಾರ್ಯಕರ್ತರು ಮಾಡಿದ್ದಾರೆ. ಅದೇ ರೀತಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಬೆಂಬಲಿಗರೂ ಟಿಕೇಟ್​ ಶಕುಂತಳಾ ಶೆಟ್ಟಿಗೆ ನೀಡುವಂತೆ ಒತ್ತಡ ಹಾಕಿದ್ದಾರೆ. ಹೀಗಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೇಟ್ ಕೂಡಾ ಕೈ ನಾಯಕರಿಗೆ ತಲೆನೋವಾಗಿರುವಂತಹದು.

ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನಿಷ್ಟ ನಾಲ್ಕರಿಂದ ಐದು ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ ಪಕ್ಷ ಟಿಕೇಟ್ ವಿಚಾರದಲ್ಲಿ ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗೆ ಟಿಕೇಟ್ ನೀಡುವ ಪ್ರಯತ್ನ ಮಾಡಿದೆ. ಸದ್ಯ ಐದು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಿದ್ದು, ಮುಂದಿನ ಹಂತದಲ್ಲಿ ಉಳಿದ ಮೂರು ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆ ಮಾಡಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular