ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಸಂಬಂಧ ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.
ರಾಜಕಾರಣಿಗಳು, ಸಾಮಾಜಿಕ ಚಿಂತಕರು, ಸರ್ವಧರ್ಮದ ಹಿರಿಯರು ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಬಂದ ಮನವಿಗಳನ್ನು ಪರಿಗಣಿಸಿ, ಸಾರ್ವಜನಿಕರ ಬೇಡಿಕೆ ಮತ್ತು ಆಡಳಿತಾತ್ಮಕ ಅನುಕೂಲತೆಯ ದೃಷ್ಟಿಯಿಂದ ಜಿಲ್ಲೆಯ ಹೆಸರನ್ನು ಬದಲಾಯಿಸುವ ಪ್ರಸ್ತಾವನೆಯನ್ನು ಸರ್ಕಾರ ಮುಂದಿಟ್ಟಿದೆ.
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು 2026ರ ಅಕ್ಟೋಬರ್ 1ರಂದು ಈ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಸೆಕ್ಷನ್ 4(4A) ಹಾಗೂ ಸಂಬಂಧಿತ ಮಾರ್ಗಸೂಚಿಗಳ ಅನ್ವಯ ಮರುನಾಮಕರಣ ಪ್ರಕ್ರಿಯೆ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಸಾರ್ವಜನಿಕರಿಂದ 30 ದಿನಗಳೊಳಗೆ ಅಭಿಪ್ರಾಯ ಸಲ್ಲಿಸಲು ಅವಕಾಶ
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಕುರಿತು ಸಾರ್ವಜನಿಕರು ತಮ್ಮ ಸಲಹೆ, ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಅಧಿಸೂಚನೆಯು ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಲಿಖಿತವಾಗಿ ಅಥವಾ ಇ-ಮೇಲ್ ಮೂಲಕ ಅಭಿಪ್ರಾಯ ಸಲ್ಲಿಸಲು ಅವಕಾಶ ನೀಡಲಾಗಿದೆ.
ಸಾರ್ವಜನಿಕರಿಂದ ಸ್ವೀಕೃತವಾಗುವ ಸಲಹೆ ಹಾಗೂ ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಯಾವ ವಿಳಾಸಕ್ಕೆ ಅಭಿಪ್ರಾಯ ಸಲ್ಲಿಸಬೇಕು?
ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಸಚಿವಾಲಯ, ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು.
- ಮುಖ್ಯಮಂತ್ರಿ ಸಚಿವಾಲಯ: cm.kar@nic.in
- ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ: dc.mnglr@gmail.com
ಹೊಸ ಹೆಸರಿನ ರೂಪ ಹೇಗಿರಲಿದೆ?
ಪ್ರಸ್ತಾವನೆಯ ಪ್ರಕಾರ, ಜಿಲ್ಲೆಯ ಹೊಸ ಹೆಸರು ಕನ್ನಡದಲ್ಲಿ ‘ಮಂಗಳೂರು ಜಿಲ್ಲೆ’, ಇಂಗ್ಲಿಷ್‌ನಲ್ಲಿ ‘MANGALURU DISTRICT’ ಹಾಗೂ ದೇವನಾಗರಿ ಲಿಪಿಯಲ್ಲಿ ‘मंगलुरु ज़िला’ ಎಂದು ಇರಲಿದೆ.
ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರ ಸಹಿಯೊಂದಿಗೆ ಅಧಿಸೂಚನೆ ಹೊರಡಿಸಲಾಗಿದೆ.

