Saturday, October 17, 2026
Homeಜಿಲ್ಲೆಮಂಗಳೂರು : ತುಳುನಾಡಿನ ಹುಲಿವೇಷದ ವೈಭವಕ್ಕೆ ಮತ್ತಷ್ಟು ಮೆರುಗು ; ಅಕ್ಟೋಬರ್ 20ಕ್ಕೆ ಮಂಗಳೂರಿನಲ್ಲಿ ಪಿಲಿನಲಿಕೆ-11…!

ಮಂಗಳೂರು : ತುಳುನಾಡಿನ ಹುಲಿವೇಷದ ವೈಭವಕ್ಕೆ ಮತ್ತಷ್ಟು ಮೆರುಗು ; ಅಕ್ಟೋಬರ್ 20ಕ್ಕೆ ಮಂಗಳೂರಿನಲ್ಲಿ ಪಿಲಿನಲಿಕೆ-11…!

ಮಂಗಳೂರು : ತುಳುನಾಡಿನ ಸಾಂಪ್ರದಾಯಿಕ ಹುಲಿವೇಷ ಕುಣಿತದ ವೈಭವವನ್ನು ಸಾರುವ ಪಿಲಿನಲಿಕೆ-11 ಸ್ಪರ್ಧೆ ಅಕ್ಟೋಬರ್ 20ರಂದು ಮಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸ್ಪರ್ಧೆ ಆರಂಭವಾಗಲಿದೆ.

ಪಿಲಿನಲಿಕೆ ಪ್ರತಿಷ್ಠಾನ (ರಿ.) ಅಧ್ಯಕ್ಷ ಮಿಥುನ್ ರೈ ಅವರ ಸಾರಥ್ಯದಲ್ಲಿ, ನಮ್ಮ ಟಿವಿ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ 10 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಪಿಲಿನಲಿಕೆ ಸ್ಪರ್ಧೆಯ 11ನೇ ಆವೃತ್ತಿಯಲ್ಲಿ ತುಳುನಾಡಿನ ಪ್ರತಿಷ್ಠಿತ 9 ಹುಲಿವೇಷ ತಂಡಗಳು ಭಾಗವಹಿಸಲಿವೆ.

₹10 ಲಕ್ಷ ಪ್ರಥಮ ಬಹುಮಾನ!

ಈ ಬಾರಿಯ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ₹10 ಲಕ್ಷ ನಗದು ಬಹುಮಾನ ಹಾಗೂ ಫಲಕ ನೀಡಲಾಗುತ್ತದೆ. ದ್ವಿತೀಯ ಬಹುಮಾನವಾಗಿ ₹5 ಲಕ್ಷ ಮತ್ತು ತೃತೀಯ ಬಹುಮಾನವಾಗಿ ₹3 ಲಕ್ಷ ಹಾಗೂ ಫಲಕ ನೀಡಲಾಗುತ್ತದೆ.

ವೈಯಕ್ತಿಕ ವಿಭಾಗದಲ್ಲೂ ವಿಶೇಷ ಬಹುಮಾನಗಳಿದ್ದು, ಅತ್ಯುತ್ತಮ ಮರಿಹುಲಿ, ಕರಿಹುಲಿ, ಮುಡಿ ಹಾರಿಸುವಿಕೆ, ತಾಸೆ, ಬಣ್ಣಗಾರಿಕೆ ಹಾಗೂ ಅತ್ಯುತ್ತಮ ಹುಲಿಕುಣಿತ ವಿಭಾಗಗಳಲ್ಲಿ ವಿಜೇತರಿಗೆ ತಲಾ ₹50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ₹50 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ.

ತಾರೆಯರ ಮೆರುಗು

ಪಿಲಿನಲಿಕೆ-11ಕ್ಕೆ ಕ್ರಿಕೆಟ್ ಕ್ಷೇತ್ರದ ದಿಗ್ಗಜ ದಿನೇಶ್ ಕಾರ್ತಿಕ್, ಗ್ರೇಟ್ ಕಾಲಿ ಸೇರಿದಂತೆ ಬಾಲಿವುಡ್, ಸ್ಯಾಂಡಲ್‌ವುಡ್ ಹಾಗೂ ಕೋಸ್ಟಲ್‌ವುಡ್‌ನ ಖ್ಯಾತ ತಾರೆಯರು ಆಗಮಿಸುವ ನಿರೀಕ್ಷೆಯಿದೆ. ಗಣ್ಯರ ಉಪಸ್ಥಿತಿಯೊಂದಿಗೆ ಈ ಬಾರಿಯ ಕಾರ್ಯಕ್ರಮ ಮತ್ತಷ್ಟು ಆಕರ್ಷಣೆ ಪಡೆಯಲಿದೆ.

ತುಳುನಾಡಿನ ಹುಲಿವೇಷ ಕಲೆಯ ಮೂಲ ಸ್ವರೂಪವನ್ನು ಉಳಿಸಿ, ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಪಿಲಿನಲಿಕೆ ಸ್ಪರ್ಧೆ ಆಯೋಜಿಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular