ಮಂಗಳೂರು : ಮಂಗಳೂರಿನಲ್ಲಿ ಮನಕಲಕುವ ಘಟನೆ ನಡೆದಿದೆ. ತಂಗಿಯ ಆತ್ಮಹತ್ಯೆಯಿಂದ ತೀವ್ರವಾಗಿ ನೊಂದಿದ್ದ ಸಹೋದರನೊಬ್ಬ, ಗಲ್ಫ್ನಿಂದ ಮಂಗಳೂರಿಗೆ ಮರಳಿದ ಕೆಲವೇ ಗಂಟೆಗಳಲ್ಲಿ ಲಾಡ್ಜ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೇರಳದ ಬೇಕಲ್ ಮೂಲದ 24 ವರ್ಷದ ಅರ್ಜುನ್ ಮಹೇಶ್ ಮೃತ ಯುವಕ. ಕಳೆದ ಜೂನ್ನಲ್ಲಿ ಅರ್ಜುನ್ ಅವರ ತಂಗಿ ಐಜಾ ಆರ್. ಮಹೇಶ್ ಕೋಚಿಂಗ್ ಸೆಂಟರ್ನ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಂಗಿಯ ಸಾವಿನಿಂದ ಅರ್ಜುನ್ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ.
ಭಾನುವಾರ ಗಲ್ಫ್ನಿಂದ ವಿಮಾನದ ಮೂಲಕ ಮಂಗಳೂರಿಗೆ ಬಂದಿದ್ದ ಅರ್ಜುನ್ ಬಳಿಕ ನಾಪತ್ತೆಯಾಗಿದ್ದರು. ಮೊಬೈಲ್ ಸ್ವಿಚ್ಆಫ್ ಆಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಸೋಮವಾರ ಮಧ್ಯಾಹ್ನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮರವೂರಿನ ಲಾಡ್ಜ್ವೊಂದರ ಕೊಠಡಿಯಲ್ಲಿ ಅರ್ಜುನ್ ಮೃತದೇಹ ಪತ್ತೆಯಾಗಿದೆ.
ಕೆಲವೇ ತಿಂಗಳ ಅಂತರದಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿರುವುದು ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದೆ. ಘಟನೆ ಸಂಬಂಧ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

