Wednesday, June 3, 2026
Flats for sale
Homeಜಿಲ್ಲೆಮಂಗಳೂರು : ಚಿಕ್ಕಮೇಳಗಳ ಶಿಸ್ತುಬದ್ಧ ನಿರ್ವಹಣೆಗೆ ಒಕ್ಕೂಟದ ನೂತನ ನಿಯಮಾವಳಿ: ಸಾರ್ವಜನಿಕರ ಸಹಕಾರಕ್ಕೆ ಮನವಿ.

ಮಂಗಳೂರು : ಚಿಕ್ಕಮೇಳಗಳ ಶಿಸ್ತುಬದ್ಧ ನಿರ್ವಹಣೆಗೆ ಒಕ್ಕೂಟದ ನೂತನ ನಿಯಮಾವಳಿ: ಸಾರ್ವಜನಿಕರ ಸಹಕಾರಕ್ಕೆ ಮನವಿ.

ಮಂಗಳೂರು : ಯಕ್ಷಗಾನದ ಪಾರಂಪರಿಕ ಚಿಕ್ಕಮೇಳಗಳ ಸಂಪ್ರದಾಯವನ್ನು ಸಂರಕ್ಷಿಸುವ ಹಾಗೂ ಶಿಸ್ತುಬದ್ಧವಾಗಿ ನಡೆಸುವ ಉದ್ದೇಶದಿಂದ ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ (ರಿ.), ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಮಿತಿ ನೂತನ ನಿಯಮಾವಳಿಗಳನ್ನು ಪ್ರಕಟಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶೋಕ್ ಶೆಟ್ಟಿ ಸರಪಾಡಿ ಯಕ್ಷಗಾನವು ಕರಾವಳಿ ಭಾಗದ ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಸಂಪತ್ತಾಗಿದ್ದು, ಮಳೆಗಾಲದಲ್ಲಿ ಮನೆಮನೆಗೆ ತೆರಳಿ ಪ್ರದರ್ಶನ ನೀಡುವ “ಚಿಕ್ಕಮೇಳ” ಸಂಪ್ರದಾಯವನ್ನು ಗೌರವಯುತವಾಗಿ ಉಳಿಸುವ ಅಗತ್ಯವಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಕೆಲ ಅನಧಿಕೃತ ತಂಡಗಳು ಚಿಕ್ಕಮೇಳದ ಹೆಸರಿನಲ್ಲಿ ತಿರುಗಾಟ ನಡೆಸಿ ಕಲೆಯ ಘನತೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಚಿಕ್ಕಮೇಳ ತಂಡಗಳನ್ನು ಒಂದೇ ನಿಯಮಾವಳಿಯಡಿ ತರಲು ಒಕ್ಕೂಟ ರಚಿಸಲಾಗಿದೆ ಎಂದು ವಿವರಿಸಿದರು.

ಪ್ರಮುಖ ನಿರ್ಧಾರಗಳು.

ಒಕ್ಕೂಟದ ಅಧಿಕೃತ ಪರವಾನಿಗೆ ಪಡೆದ ತಂಡಗಳಿಗೆ ಮಾತ್ರ ತಿರುಗಾಟಕ್ಕೆ ಅವಕಾಶ.

ಸಂಜೆ 6 ಗಂಟೆಯಿಂದ ರಾತ್ರಿ 10.30 ಗಂಟೆಯೊಳಗೆ ಮಾತ್ರ ಪ್ರದರ್ಶನ.

ಕನ್ನಡ ಹಾಗೂ ತುಳು ಭಾಷೆಯ 20 ನಿಮಿಷ ಮೀರದ ಉತ್ತಮ ಸಂದೇಶವಿರುವ ಪ್ರಸಂಗಗಳ ಪ್ರದರ್ಶನ.

ಒಂದೇ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ತಂಡಗಳು ಒಂದೇ ಮನೆಗೆ ಭೇಟಿ ನೀಡದಂತೆ ಕ್ರಮ.

ತಂಡದಿಂದ ಯಾವುದೇ ಅನಪೇಕ್ಷಿತ ಘಟನೆ ನಡೆದರೆ ಸಾರ್ವಜನಿಕರು ಒಕ್ಕೂಟಕ್ಕೆ ದೂರು ನೀಡಬಹುದಾಗಿದೆ.

ಸಂಗ್ರಹವಾಗುವ ಆದಾಯದ ಒಂದು ಭಾಗವನ್ನು ಕಲಾವಿದರ ಸಂಕಷ್ಟ ನಿಧಿಗೆ ಮೀಸಲಿಡಲಾಗುವುದು.

ಯಕ್ಷ ವೇಷಭೂಷಣ ದುರುಪಯೋಗಕ್ಕೆ ವಿರೋಧ ಯಕ್ಷಗಾನದ ವೇಷಭೂಷಣ ಧರಿಸಿ ವಿವಿಧ ಹಬ್ಬಗಳ ಸಂದರ್ಭದಲ್ಲಿ ಭಿಕ್ಷಾಟನೆ ನಡೆಸುವ ಪ್ರವೃತ್ತಿಯನ್ನು ತಡೆಯಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಒಕ್ಕೂಟವು ಸಾರ್ವಜನಿಕರು ಅಧಿಕೃತ ಪರವಾನಿಗೆ ಹೊಂದಿರುವ ಚಿಕ್ಕಮೇಳ ತಂಡಗಳಿಗೆ ಮಾತ್ರ ಅವಕಾಶ ನೀಡಿ ಯಕ್ಷಗಾನ ಕಲಾವಿದರ ಬದುಕಿಗೆ ಬೆಂಬಲ ನೀಡುವಂತೆ ಮನವಿ ಮಾಡಿದೆ. ಇಂತಹ ಘಟನೆಗಳು ಕಂಡುಬಂದರೆ ಸಾರ್ವಜನಿಕರು ಹಾಗೂ ಕಲಾಭಿಮಾನಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್, ಉಪಾಧ್ಯಕ್ಷ ರಮೇಶ್ ಕುಲಶೇಖರ, ಮೋಹನ ಕಲಂಬಾಡಿ,ಕೋಶಾಧಿಕಾರಿ: ದಿವಾಕರ ದಾಸ್ (ಶೃತಿ ಆಟ್ಸ್)
ಜಯಂತ್ ಕೆರೆಕಾಡು,ಕಾನೂನು ಸಲಹೆಗಾರರು : ಮೋಹನದಾಸ್ ರೈ ಯವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular