ಮಂಗಳೂರು : ಗೋಮಾತೆಗೆ ರಾಷ್ಟ್ರಮಾತೆ, ರಾಷ್ಟ್ರೀಯ ದೇವತೆ, ರಾಷ್ಟ್ರೀಯ ಪರಂಪರೆ ಹಾಗೂ ರಾಷ್ಟ್ರೀಯ ಗೌರವದ ಸ್ಥಾನಮಾನ ನೀಡಬೇಕು, ಗೋಹತ್ಯೆಯನ್ನು ದೇಶಾದ್ಯಂತ ಸಂಪೂರ್ಣ ನಿಷೇಧಿಸಬೇಕು ಹಾಗೂ ಗೋಸೇವೆಗಾಗಿ ಕೇಂದ್ರ ಕಾನೂನು ರೂಪಿಸಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ‘ಗೋ ಸಮ್ಮಾನ್ ಆಹ್ವಾನ ಅಭಿಯಾನ’ ನಡೆಯುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರು ತಿಳಿಸಿದ್ದಾರೆ.
ದೇಶದ ಸಾಧು-ಸಂತರು, ಆಚಾರ್ಯರು (ಶಿಕ್ಷಕರು), ಗೋಸೇವಾ ಸಂಸ್ಥೆಗಳು, ಗೋಪಾಲಕರು, ಗೋಭಕ್ತರು ಹಾಗೂ ಗೋಪ್ರೇಮಿಗಳ ಸಹಭಾಗಿತ್ವದಲ್ಲಿ ನಾಲ್ಕು ಹಂತಗಳಲ್ಲಿ ಈ ಅಭಿಯಾನ ನಡೆಯುತ್ತಿದೆ. ಅಭಿಯಾನಕ್ಕೆ ನಂದಿ ಬಾಬಾರ ಆಶೀರ್ವಾದವಿದ್ದು, ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಪ್ರಚಾರಕರ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ.
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಭಿಯಾನಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ನೇತೃತ್ವ ವಹಿಸಿದ್ದು, ಮೂರು ಜಿಲ್ಲೆಗಳ ಜವಾಬ್ದಾರಿಯನ್ನು ಗಜೇಂದ್ರ ಎಸ್. ಬೇಲೆಮನೆ ಹಾಗೂ ನಾಗರಾಜ್ ಪೂಜಾರಿ ಅವರಿಗೆ ನೀಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಕರಪತ್ರ ವಿತರಣೆ ಹಾಗೂ ಸಾರ್ವಜನಿಕರ ಸಹಿ ಸಂಗ್ರಹ ಕಾರ್ಯ ಆರಂಭಗೊಂಡಿದೆ. ಅಭಿಯಾನದ ಮೊದಲ ಹಂತದಲ್ಲಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದ್ದು, ಎರಡನೇ ಹಂತವಾಗಿ ಜುಲೈ 27ರಂದು ಉಡುಪಿ ಜಿಲ್ಲೆಯ ಏಳು ತಾಲೂಕುಗಳ ಗೋಭಕ್ತರು, ಗೋಪ್ರೇಮಿಗಳು ಹಾಗೂ ಹಿಂದೂ ಸಮಾಜದ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಹಿ ಸಂಗ್ರಹದೊಂದಿಗೆ ಮನವಿ ಸಲ್ಲಿಸಲಿದ್ದಾರೆ.
ಮುಂದಿನ ಹಂತದಲ್ಲಿ ಅಕ್ಟೋಬರ್ ತಿಂಗಳಲ್ಲಿ ರಾಜ್ಯಮಟ್ಟದ ಹಾಗೂ 2027ರ ಜನವರಿಯಲ್ಲಿ ರಾಷ್ಟ್ರಮಟ್ಟದ ಬೃಹತ್ ಅಭಿಯಾನ ನಡೆಯಲಿದೆ. ಬೇಡಿಕೆಗಳಿಗೆ ಸ್ಪಂದನೆ ದೊರೆಯದಿದ್ದರೆ, 2027ರ ಏಪ್ರಿಲ್‌ನಲ್ಲಿ 108 ಮಂದಿ ಸಾಧು-ಸಂತರು ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ 108 ಮಂದಿ ಸಾಧು-ಸಂತರಲ್ಲಿ ಉಡುಪಿ ಜಿಲ್ಲೆಯ ಶಂಕರಪುರದ ದ್ವಾರಕಾಮಾಯಿ ಮಠದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಕೂಡ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಪ್ರಮುಖ ಬೇಡಿಕೆಗಳು :
ಭಾರತದಲ್ಲಿ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸಬೇಕು.
ಗೋಮಾತೆಗೆ ರಾಷ್ಟ್ರಮಾತೆ, ರಾಷ್ಟ್ರೀಯ ದೇವತೆ ಹಾಗೂ ರಾಷ್ಟ್ರೀಯ ಪರಂಪರೆಯ ಸ್ಥಾನಮಾನ ನೀಡಬೇಕು.
ಗೋಸೇವೆಗಾಗಿ ಕೇಂದ್ರ ಕಾನೂನು ಹಾಗೂ ಪ್ರತ್ಯೇಕ ಕೇಂದ್ರ ಸಚಿವಾಲಯ ಸ್ಥಾಪಿಸಬೇಕು.
ಗೋಚಾರ ಮಂಡಳಿ ರಚನೆ, ಮೇವು ಭದ್ರತಾ ನೀತಿ ಜಾರಿ ಹಾಗೂ ಗೋಆಧಾರಿತ ಕೃಷಿಗೆ ಉತ್ತೇಜನ ನೀಡಬೇಕು.
ಪಂಚಗವ್ಯ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸಬೇಕು.
ಪತ್ರಿಕಾಗೋಷ್ಠಿಯಲ್ಲಿ ಗಜೇಂದ್ರ ಎಸ್. ಬೇಲೆಮನೆ, ನಾಗರಾಜ್ ಬೈಂದೂರು ಹಾಗೂ ಧನರಾಜ್ ಮಂಗಳೂರು ಉಪಸ್ಥಿತರಿದ್ದರು.


