ಮಂಗಳೂರು:ಕಂಕನಾಡಿ ಗರಡಿ-150ರ ಸಂಭ್ರಮವನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಶ್ರಮಿಸಬೇಕಾಗಿದ್ದು, ಇದೊಂದು ಸಂಘಟಿತ ಸಂಗಮ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಕಂಕನಾಡಿ ಗರಡಿ ಕ್ಷೇತ್ರದಲ್ಲಿ ಗರಡಿ ಸಂಭ್ರಮ ಅಂಗವಾಗಿ ರಚಿಸಲಾದ 32ಸಮಿತಿಗಳ ಮುಖ್ಯಸ್ಥರ ಅಂತಿಮ ಹಂತದ ಸಿದ್ಧತಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಂಕನಾಡಿ ಗರಡಿ ಸಂಭ್ರಮದ ಯಶಸ್ಸಿಗೆ ಮಂಗಳೂರು ಮಹಾನಗರಪಾಲಿಕೆ, ಜಿಲ್ಲಾಡಳಿತ, ನಗರ ಪೊಲೀಸ್ ಸಂಪೂರ್ಣ ಕೈಜೋಡಿ ಕೆಲಸ ಮಾಡಲಿದೆ. ಇದಕ್ಕೆ ಸಂಬಂಧಪಟ್ಟಂತೆ ಮಂಗಳವಾರದೊಳಗೆ ಅಧಿಕಾರಿಗಳು ಮತ್ತು ಗರಡಿ ಆಡಳಿತ ಮಂಡಳಿ ಸಭೆ ಕರೆದು ಚರ್ಚಿಸಲಾಗುವುದು. ಗರಡಿ ಸಂಭ್ರಮದ ಮೂಲಭೂತ ಸೌಕರ್ಯಕ್ಕೆ 15ಲಕ್ಷ ರೂ. ಅನುದಾನ, ಮಹಾನಗರಪಾಲಿಕೆಯಿಂದ ವಿದ್ಯುದ್ದೀಪಾಲಂಕಾರಕ್ಕೆ 15 ಲಕ್ಷ ರೂ., ತಾನು ವೈಯಕ್ತಿಕವಾಗಿ ಸಂಪರ್ಕಮಾಡಿ 10ಲಕ್ಷರೂ. ಸಂಗ್ರಹ ಮಾಡಿ ಕ್ಷೇತ್ರಕ್ಕೆ ನೀಡಲಿದ್ದೇನೆ ಎಂದು ವೇದವ್ಯಾಸ್ ಕಾಮತ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಮೇಯರ್ ಜಯಾನಂದ ಅಂಚನ್ ಮಾತನಾಡಿ, ಕಂಕನಾಡಿ ಗರಡಿ ಸಂಭ್ರಮ ನಮಗೆಲ್ಲ ಸಿಕ್ಕಿದ ಯೋಗ ಎಂದು ಭಾವಿಸೋಣ. ಕಾರ್ಯಕ್ರಮದ ಯಶಸ್ಸಿಗೆ ಮಹಾನಗರಪಾಲಿಕೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್ ಮಾತನಾಡಿ, ಮಾ.3ರಿಂದ 7ರವರೆಗೆ ನಡೆಯುವ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಮುಖ್ಯವಾಗಿದೆ. ವಿದೇಶ, ಹೊರರಾಜ್ಯ, ಹೊರ ಜಿಲ್ಲೆ ಸೇರಿದಂತೆ ನಾನಾ ಕಡೆಯಿಂದ ಲಕ್ಷಾಂತರ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಲಿದ್ದು, ಕ್ಷೇತ್ರಕ್ಕೆ ಬಂದ ಅವರನ್ನು ಸತ್ಕರಿಸಿ ಗೌರವಯುತವಾಗಿ ಕಳುಹಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ವ್ಯವಸ್ಥೆಗಳು ಮಾದರಿಯಾಗಿ ನಡೆಯಲು ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಮ್ಯಾನೇಜರ್ ಜೆ. ಕಿಶೋರ್ ಕುಮಾರ್, ಕಂಕನಾಡಿ ಗರಡಿ 150ರ ಸಂಭ್ರಮ ಸಮಿತಿ ಪ್ರಧಾನ ಸಂಚಾಲಕ ಎಂ. ಮೋಹನ್ ಉಜ್ಜೋಡಿ, ಕ್ಷೇತ್ರದ ಮೊಕ್ತೇಸರರಾದ ಬಿ.ವಿಠಲ, ಎ. ವಾಮನ, ಬಿ. ದಾಮೋದರ ನಿಸರ್ಗ, ದಿವರಾಜ್, ದಿನೇಶ್ ಅಂಚನ್, ಜೆ. ವಿಜಯ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಎಸ್‌ಆರ್‌ಆರ್ ಸಂಸ್ಥೆಯ ಮಾಲೀಕ ಶೈಲೇಂದ್ರ ವೈ. ಸುವರ್ಣ, ಎಂ.ಪಿ. ಮಾಲೀಕ ಎಂ.ಪಿ. ದಿನೇಶ್, ಆರ್ಥಿಕ ಸಮಿತಿ ಪ್ರಮುಖ ಶರಣ್ ಪಂಪ್‌ವೆಲ್, ಕಾರ್ಪೊರೇಟರ್‌ಗಳಾದ ಪ್ರವೀಣ್‌ಚಂದ್ರ ಆಳ್ವ, ಸಂದೀಪ್ ಗರೋಡಿ, ರೂಪಾಶ್ರೀ ಪೂಜಾರಿ, ಕೇಶವ ಮರೋಳಿ ಮತ್ತಿತರರು ಉಪಸ್ಥಿತರಿದ್ದರು.
ನಾನಾ ಸಮಿತಿಯ ಸಂಚಾಲಕರಾದ ವಸಂತ್ ಪೂಜಾರಿ, ಆನಂದ್ ಸರಿಪಲ್ಲ, ಜಯಾನಂದ್, ಚಿತ್ತರಂಜನ್ ಬೋಳಾರ್ ಕಾರ್ಯಕ್ರಮದ ಸಹಕಾರದ ಬಗ್ಗೆ ಮಾತನಾಡಿದರು.