ಮಂಗಳೂರು : ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ವತಿಯಿಂದ ಕುತ್ತಾರ್ ಜಂಕ್ಷನ್ ನಲ್ಲಿ ನೂತನ ವೃತ್ತ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಗೊಂಡಿರುವ ನಡುವೆಯೇ, ಕೊರಗಜ್ಜನ ಹೆಸರಿನಲ್ಲಿ ವೃತ್ತ ನಿರ್ಮಿಸಬಾರದೆಂದು ಒತ್ತಾಯಿಸಿ ಅಲ್ಪಸಂಖ್ಯಾತ ಸಮುದಾಯದ ಕೆಲವರು ವಿಧಾನಸಭೆ ಸಭಾಧ್ಯಕ್ಷ U. T.ಖಾದರ್ ಅವರನ್ನು ಪ್ರಶ್ನಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರ್ಷಗಳ ಹಿಂದೆ ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ಬರುವ ಭಕ್ತರಿಗೆ ಮಾಹಿತಿ ನೀಡುವ ಉದ್ದೇಶದಿಂದ ಸ್ಥಳೀಯ ಬಜರಂಗದಳ ಕಾರ್ಯಕರ್ತರು ಕುತ್ತಾರು ಜಂಕ್ಷನ್‌ನಲ್ಲಿ ಕೊರಗಜ್ಜನ ಮುಟ್ಟಾಳೆಯ ಪ್ರತಿಕೃತಿಯುಳ್ಳ ಸಣ್ಣ ವೃತ್ತ ನಿರ್ಮಿಸಿದ್ದರು. ಪ್ರಸ್ತುತವೂ ಆ ವೃತ್ತ ಅಲ್ಲಿ ಅಸ್ತಿತ್ವದಲ್ಲಿದೆ. ಈಗ ನಿಟ್ಟೆ ವಿವಿಯ ವತಿಯಿಂದ ಅದೇ ಜಂಕ್ಷನ್‌ನಲ್ಲಿ ನೂತನ ವೃತ್ತ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಕೊರಗಜ್ಜನ ಆದಿಕ್ಷೇತ್ರದ ಮಾಹಿತಿ ಜೊತೆಗೆ ಇತರ ಧರ್ಮೀಯರ ಕ್ಷೇತ್ರಗಳ ಮಾಹಿತಿಯನ್ನೂ ಅಳವಡಿಸುವ ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ.
ಆದರೆ ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯದೇ ಕೆಲವರು ಶಾಸಕ ಹಾಗೂ ಸಭಾಧ್ಯಕ್ಷ U. T. ಖಾದರ್ ಅವರನ್ನು ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದ್ದು, ಅದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.


