ಮಂಗಳೂರು : ಕಾರು ಪರಸ್ಪರ ತಾಗಿದ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಬಳಿಕ ಯುವಕನ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕಾವೂರು ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ, ಜೂನ್ 2ರಂದು ರಾತ್ರಿ ಕೂಳೂರು ಪ್ರದೇಶದಲ್ಲಿ ಕಾರುಗಳು ಸ್ವಲ್ಪ ತಾಗಿದ ವಿಚಾರವಾಗಿ ಎರಡು ಗುಂಪಿನ ನಡುವೆ ಮಾತುಕತೆ ನಡೆದಿತ್ತು. ಬಳಿಕ ಪಂಜಿಮೊಗರು ಸಮೀಪದ ಆತ್ಮಶಕ್ತಿ ಸೊಸೈಟಿ ಎದುರಿನ ಜನರಲ್ ಸ್ಟೋರ್ ಬಳಿ ಮತ್ತೆ ಮುಖಾಮುಖಿಯಾದ ವೇಳೆ ಗಲಾಟೆ ನಡೆದಿದ್ದು, ಪರಸ್ಪರ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರುದಾರ ಸಂಜಯ್ (23) ಹಾಗೂ ಅವರ ಸ್ನೇಹಿತ ಸೃಜನ್ ಮೇಲೆ ಸುಮಾರು 4-5 ಮಂದಿ ದಾಳಿ ನಡೆಸಿ, ಸೋಡಾ ಬಾಟಲಿಯಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಸಂಜಯ್ ಅವರಿಗೆ ಗಾಯಗಳಾಗಿದ್ದು, ಅವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣೆಗೆ ಬಂದ ಶಶಾಂಕ್ ಭಂಡಾರ್ಕರ್ ಅವರ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ತಿಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಕಾವೂರು ಪೊಲೀಸರು ಶಹಾಜ್ (23), ಸಂಶಿರ್ (30), ಮಹಮ್ಮದ್ ರಿಷಾನ್ (18) ಹಾಗೂ ಶಮಾಜ್ (29) ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕಾರು ತಾಗಿದ ವಿಚಾರದಲ್ಲಿ ಉಂಟಾದ ವಾಗ್ವಾದವೇ ಬಳಿಕ ಪರಸ್ಪರ ಹಲ್ಲೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಕಾವೂರು ಪೊಲೀಸ್ ಠಾಣೆಯಲ್ಲಿ BNS-2023ರ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


