ಮಂಗಳೂರು : ಬಂಟ್ವಾಳದ ಅಮ್ಮುಂಜೆ ನಿವಾಸಿ 73 ವರ್ಷದ ಬೆನಡಿಕ್ಟ್ ಕಾರ್ಲೋ ಅವರ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮಂಗಳೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಶಿಕ್ಷೆಗೆ ಒಳಗೊಂಡವರನ್ನು ಎಲ್ಮಾ ಪ್ರೆಶ್ಚಿತ್ ಬರೆಟ್ರೋ,ಚರಣ್ ಕುಮಾರ್ ಹಾಗೂ ಸತೀಶ್ ನಾಯಕ್ ಎಂದು ತಿಳಿದುಬಂದಿದೆ. 2021ರಲ್ಲಿ ವೃದ್ಧೆಯ ಆರೈಕೆ ಮಾಡುತ್ತಿದ್ದ ಮಹಿಳೆ ಹಾಗೂ ಆಕೆಯ ಇಬ್ಬರು ಸಹಚರರು ಚಿನ್ನಾಭರಣ ದೋಚುವ ಉದ್ದೇಶದಿಂದ ಮೊದಲು ವಿಷ ನೀಡಿ ಕೊಲ್ಲಲು ಯತ್ನಿಸಿ, ಬಳಿಕ ಉಸಿರುಗಟ್ಟಿಸಿ ಹತ್ಯೆಗೈದಿದ್ದರು. 61.070 ಗ್ರಾಂ ಚಿನ್ನಾಭರಣ ದೋಚಿ ಸಾಕ್ಷ್ಯನಾಶಪಡಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಪ್ರಕರಣದ ತನಿಖೆಯನ್ನು ಆಗಿನ ಬಂಟ್ವಾಳ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ನಡೆಸಿದ್ದು, ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.


