ಮಂಗಳೂರು : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (ರಿ.) ಮಂಗಳಾದೇವಿ ವಲಯ ಸಮಿತಿಯ ವತಿಯಿಂದ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ಭಾನುವಾರ ಮಂಗಳಾದೇವಿ ದೇವಸ್ಥಾನದ ಬಳಿಯ ಕಾಂತಿ ಚರ್ಚ್ ಹಾಲ್ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಗಣ್ಯರು ಉದ್ಘಾಟಿಸಿದರು.



ಬಳಿಕ ಮಾತನಾಡಿದ ಪ್ರಶಾಂತ್ ಕುಮಾರ್ ಕಲ್ಲೂರು, ಆಟಿ ತಿಂಗಳು ಕರಾವಳಿಯ ಜನಜೀವನದಲ್ಲಿ ಕಷ್ಟದ ಕಾಲವಾಗಿದ್ದರೂ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿದೆ ಎಂದರು.
ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ನಿರಂತರ ಮಳೆಯಾಗುತ್ತಿತ್ತು. ಭತ್ತದ ನಾಟಿ ಕಾರ್ಯ ಮುಗಿದ ಬಳಿಕ ರೈತರಿಗೆ ಕೃಷಿ ಚಟುವಟಿಕೆಗಳಿಂದ ಕೊಂಚ ಬಿಡುವು ಸಿಗುತ್ತಿತ್ತು. ಹೊಸ ಬೆಳೆ ಕೈಗೆ ಸಿಗದ ಸಂದರ್ಭದಲ್ಲಿ ಹಳೆಯ ಧಾನ್ಯಗಳ ದಾಸ್ತಾನು ಕೂಡ ಕಡಿಮೆಯಾಗುತ್ತಿದ್ದುದರಿಂದ ಕೃಷಿಕ ಕುಟುಂಬಗಳು ಆಹಾರ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎಂದು ವಿವರಿಸಿದರು. ಹಿಂದಿನ ಕಾಲದಲ್ಲಿ ರಾಸಾಯನಿಕ ಬಳಕೆಯಿಲ್ಲದೆ ಸಾವಯವ ರೀತಿಯಲ್ಲಿ ಕೃಷಿ ನಡೆಸಲಾಗುತ್ತಿತ್ತು. ಇಂದಿನ ಆಹಾರ ಪದ್ಧತಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಹಿಂದಿನ ಜೀವನಶೈಲಿ ಹಾಗೂ ಆಹಾರ ಪದ್ಧತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ಹೇಳಿದರು.
ಗೋವಿಂದಾಸ್ ಕಾಲೇಜಿನ ಉಪನ್ಯಾಸಕಿ ಹಾಗೂ ನಿರೂಪಕಿ ಅಕ್ಷತಾ ವಿ. ಮಾತನಾಡಿ, ಹಿಂದಿನ ಕಾಲದಲ್ಲಿ ಕೂಡು ಕುಟುಂಬ ವ್ಯವಸ್ಥೆ ಇದ್ದು, ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಜೀವನ ನಡೆಸುತ್ತಿದ್ದರು. ಆದರೆ ಇಂದು ಕುಟುಂಬದ ಕಾರ್ಯಕ್ರಮಗಳ ಸಂದರ್ಭದಲ್ಲಷ್ಟೇ ಎಲ್ಲರೂ ಒಂದೆಡೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.bತುಳುನಾಡು ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದ ನೆಲೆಯಾಗಿದ್ದು, ಇಲ್ಲಿ ಮಹಿಳೆಯರು ಯಾವುದೇ ಭಯವಿಲ್ಲದೆ ಮುಕ್ತವಾಗಿ ಬದುಕಲು ಸಾಧ್ಯವಾಗಿದೆ ಎಂದು ಹೇಳಿದರು. ಹಿಂದಿನ ಕಾಲದ ಸಾವಯವ ಆಹಾರ ಪದ್ಧತಿಯಿಂದ ಜನರು ದೀರ್ಘಾಯುಷ್ಯ ಹೊಂದಿದ್ದರು. ಇಂದಿನ ಆಹಾರ ಪದ್ಧತಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.
‘ಡಿಜಿಟಲ್ ಅರೆಸ್ಟ್’ ಹೆಸರಿನ ವಂಚನೆ ಬಗ್ಗೆ ಎಚ್ಚರಿಕೆ ಮಂಗಳೂರು ನಗರ ಸಂಚಾರ ಉಪವಿಭಾಗದ ಎಸಿಪಿ ನಜ್ಮ ಫಾರೂಕಿ ಮಾತನಾಡಿ, ತುಳುನಾಡಿನ ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಉತ್ತಮ ಸಂದೇಶ ನೀಡುತ್ತವೆ ಎಂದರು.
ಇತ್ತೀಚಿನ ದಿನಗಳಲ್ಲಿ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಇಂತಹ ಕರೆಗಳು ಬಂದಾಗ ಭಯಪಡದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಬ್ಯಾಂಕ್ ಖಾತೆಗಳ ವಹಿವಾಟಿನ ಮೇಲೂ ನಿಗಾ ಇಡಬೇಕು ಎಂದು ಸಲಹೆ ನೀಡಿದರು. ಒಂಟಿಯಾಗಿ ವಾಸಿಸುವ ಮಹಿಳೆಯರ ಮನೆಗಳಲ್ಲಿ ಪ್ಯಾನಿಕ್ ಬಟನ್ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಸುರಕ್ಷತೆಯ ದೃಷ್ಟಿಯಿಂದ ಉಪಯುಕ್ತ ಎಂದರು.
ಮಕ್ಕಳ ವಾಹನ, ರಸ್ತೆ ಸುರಕ್ಷತೆಗೂ ಸಲಹೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳ ಸುರಕ್ಷತೆಯ ಬಗ್ಗೆಯೂ ಪೋಷಕರು ಎಚ್ಚರ ವಹಿಸಬೇಕು. ಖಾಸಗಿ ವ್ಯಾನ್ಗಳು ಹಾಗೂ ವೈಟ್ಬೋರ್ಡ್, ಯೆಲ್ಲೋಬೋರ್ಡ್ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಸೂಕ್ತ ನಿಯಮಗಳು ಮತ್ತು ವಿಮಾ ಸೌಲಭ್ಯಗಳ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಿದರು.
ರಸ್ತೆ ಸುರಕ್ಷತೆ ಕುರಿತು ಮಾತನಾಡಿದ ಅವರು, ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಪೋಷಕರು ಅರಿವು ಮೂಡಿಸಬೇಕು. ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ಬೆಲ್ಟ್ ಧರಿಸುವುದು ಕಡ್ಡಾಯವಾಗಿ ಪಾಲಿಸಬೇಕು. ದ್ವಿಚಕ್ರ ವಾಹನ ಚಲಾಯಿಸುವಾಗ ಕೈಯಲ್ಲಿ ಹ್ಯಾಂಡ್ಬ್ಯಾಗ್ ಹಿಡಿದುಕೊಂಡು ಹೋಗುವುದರಿಂದ ಅಪಘಾತದ ಅಪಾಯ ಹೆಚ್ಚಾಗಬಹುದು. ಆದ್ದರಿಂದ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಸಿಪಿ ನಜ್ಮ ಫಾರೂಕಿ ಅವರನ್ನು ಸ್ವಾಗತಿಸಲಾಯಿತು. ನಾಗರಾಜ್ ಬಜಾಲ್ ಅವರನ್ನು ಸನ್ಮಾನಿಸಲಾಯಿತು. ಜಯಪ್ರಕಾಶ್, ಈಶ್ವರ್ ಹಾಗೂ ನಾಗೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು.
ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷೆ ರಾಜೇಶ್ವರಿ, ಸುರೇಶ್ ಸಾಲ್ಯಾನ್, ಹರೀಶ್ ರೈ, ಜಯಂತ್ ಉರ್ಲಾಡಿ, ನಳಿನಿ ಸದಾಶಿವ, ಹರೀನಾಕ್ಷಿ, ಸುಜಾತಾ ಜೋಗಿ, ಪೂರ್ಣಿಮಾ, ಸಬೀತ, ಅಶೋಕ, ಅನಂತರಾಮ, ಪದ್ಮನಾಭ ಜಲ್ಲಿಗುಡ್ಡ, ಸೀತಾರಾಮ ಸೇರಿದಂತೆ KSTA ಮಂಗಳಾದೇವಿ ವಲಯದ ಸರ್ವ ಸದಸ್ಯರು ಉಪಸ್ಥಿತರಿದ್ದರು.

