ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಲೆಬೆಟ್ಟಿನಲ್ಲಿ ಪಟಾಕಿ ಸ್ಫೋಟಗೊಂಡು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪೊರ್ಕಂಡ ನಿವಾಸಿ ಕೃಷ್ಣಪ್ಪ ಗೌಡ ಅವರ ಪುತ್ರ ಲಿಕೇಶ್ ಗೌಡ (20) ಗಾಯಗೊಂಡ ಯುವಕ.
ಮನೆಯವರು ಪಟಾಕಿ ಹಚ್ಚಿದ ಸಂದರ್ಭದಲ್ಲಿ ಮನೆಯ ಹೊರಗೆ ಬಂದಿದ್ದ ಲಿಕೇಶ್, ಬೆಂಕಿ ಹಚ್ಚಲಾಗಿದ್ದ ಪಟಾಕಿಯ ಮೇಲೆ ಆಕಸ್ಮಿಕವಾಗಿ ಕಾಲಿಟ್ಟಿದ್ದಾನೆ. ಈ ವೇಳೆ ಪಟಾಕಿ ಸ್ಫೋಟಗೊಂಡ ಪರಿಣಾಮ ಆತನ ಬಲಪಾದಕ್ಕೆ ತೀವ್ರ ಗಾಯವಾಗಿದ್ದು, ಪಾದದ ಭಾಗ ಛಿದ್ರಗೊಂಡಿದೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಲಿಕೇಶ್ನನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದೀಪಾವಳಿ ಸಂಭ್ರಮದ ನಡುವೆ ಸಂಭವಿಸಿದ ಈ ಪಟಾಕಿ ದುರಂತ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

