ಬೆಳ್ತಂಗಡಿ ; ಮಾಜಿ ಸಚಿವ, ಪ್ರಸನ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಗಂಗಾಧರ ಗೌಡ ಅವರ ಒಡೆತನದ ಮನೆ ಹಾಗೂ ಶಿಕ್ಷಣ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ಮುಂಜಾನೆ ದಾಳಿ ನಡೆಸಿದ್ದಾರೆ.
ಬೆಳಗ್ಗೆ 7.30ಕ್ಕೆ ಆರಂಭವಾಗಿ ರಾತ್ರಿ 10.30ರವರೆಗೆ ನಡೆದ ಪರಿಶೀಲನೆಯಲ್ಲಿ ಪ್ರಾಥಮಿಕ ಮಾಹಿತಿಯಂತೆ ಐದು ಕಾರುಗಳಲ್ಲಿ ಬಂದ 20ಕ್ಕೂ ಹೆಚ್ಚು ಅಧಿಕಾರಿಗಳು ಕಾಲೇಜು ಸೇರಿ 63 ಲಕ್ಷ ನಗದು, ಚಿನ್ನಾಭರಣ, ವ್ಯವಹಾರದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಗಂಗಾಧರ ಗೌಡ ಅವರನ್ನು ಕೆಪಿಸಿಸಿ ಉಪಾಧ್ಯಕ್ಷರನ್ನಾಗಿ ಏಪ್ರಿಲ್ 23 ರಂದು ನಾಮನಿರ್ದೇಶನ ಮಾಡಲಾಗಿದ್ದು, ಮರುದಿನವೇ ಐಟಿ ಇಲಾಖೆ ದಾಳಿ ನಡೆಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪಕ್ಷಗಳ ವಿರುದ್ಧ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ದಾಳಿ ವೇಳೆ ಗಂಗಾಧರ ಗೌಡ ಅವರ ಪತ್ನಿ ಪ್ರಸನ್ನ, ಪುತ್ರಿ ಡಾ.ರೇಷ್ಮಾ, ಪುತ್ರ, ಬೆಳ್ತಂಗಡಿ ಬ್ಲಾಕ್ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ ಗೌಡ ಹಾಗೂ ಅವರ ಪತ್ನಿ ಯಶ್ಮಾ ಉಪಸ್ಥಿತರಿದ್ದರು.
ಗಂಗಾಧರ ಗೌಡ ಮತ್ತು ಪುತ್ರ ರಂಜನ್ ಗೌಡ ಮಾತನಾಡಿ, ಐಟಿ ಅಧಿಕಾರಿಗಳ ದಾಳಿ ವೇಳೆ ಸೂಕ್ತ ದಾಖಲೆಗಳನ್ನು ನೀಡಿದ್ದೇವೆ. ದಾಳಿಯಿಂದ ನಾವು ವಿಚಲಿತರಾಗಿಲ್ಲ. ನಮ್ಮ ಎಲ್ಲಾ ದಾಖಲೆಗಳು ನವೀಕೃತವಾಗಿವೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಜಿಲ್ಲೆಯ ಹಾಗೂ ರಾಜ್ಯದ ಗಣ್ಯ ನಾಯಕರು ನನಗೆ ಕರೆ ಮಾಡಿ ದಾಳಿ ಕುರಿತು ವಿಚಾರಿಸಿದ್ದಾರೆ. ಭವಿಷ್ಯದಲ್ಲಿ ನಾವು ಸೂಕ್ತ ದಾಖಲೆಗಳನ್ನು ಒದಗಿಸುತ್ತೇವೆ.