ಬೆಂಗಳೂರು ; ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಮತ್ತೆ ವಿದ್ಯಾರ್ಥಿಯ ಜನಿವಾರ ತೆಗೆಸಿದ ಘಟನೆ ಗುರುವಾರ ನಡೆದಿದ್ದು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಬೆಂಗಳೂರಿನ ಮಡಿವಾಳದಲ್ಲಿನ ಕೃಪಾನಿಧಿ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿ ಸೇರಿದಂತೆ ಐದಕ್ಕೂ ಹೆಚ್ಚು ಮಕ್ಕಳ ಜನಿವಾರ ತೆಗೆಸಿದ್ದಾರೆ. ಈ ವೇಳೆ ವಿದ್ಯಾರ್ಥಿ ಜನಿವಾರ ತೆಗೆಯುವುದಿಲ್ಲ. ಅದು ಯಾವುದೇ ಮೆಟಲ್ ಅಲ್ಲ. ನಮ್ಮ ಧಾರ್ಮಿಕ ನಂಬಿಕೆ ಎಂದು ಹೇಳಿದರೂ ಕೂಡಾ ಅಲ್ಲಿನ ಸಿಬ್ಬಂದಿ ಪರೀಕ್ಷಾ ಕೇಂದ್ರದೊಳಕ್ಕೆ ಬಿಡುವುದಿಲ್ಲ. ವಾಪಸ್ ಹೋಗಲು ಸೂಚಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ವಿದ್ಯಾರ್ಥಿ ಪೋಷಕರು ಮಗನ ಭವಿಷ್ಯದ ದೃಷ್ಟಿಯಿಂದ ಜನಿವಾರ ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದ್ದರು. ನಂತರ ಪೊಲೀಸರಿಗೆ ದೂರು ನೀಡಿದ್ದರು. ಈ ಸುದ್ದಿ ಗೊತ್ತಾಗುತ್ತಿದ್ದಂತೆ ವಿವಿಧ ಸಂಘಟನೆಗಳು, ಇನ್ನುಳಿದ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರೂ ಸಹ ಇದರ ವಿರುದ್ಧ ತನಿಖೆ ನಡೆಯಬೇಕು ಎಂದು ಪಟ್ಟು ಹಿಡಿದರು. ಪರಿಸ್ಥಿತಿ ದೀರ್ಘಕ್ಕೆ ಹೋಗುತ್ತದೆ ಎಂದು ಅರಿತು ತಹಶೀಲ್ದಾರ್, ಶಿಕ್ಷಣಾಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದಾರೆ. ಪೋಷಕರ ಮನವೊಲಿಸಿ ಎಲ್ಲೂ ಈ ಬಗ್ಗೆ ಹೇಳದಂತೆ ಒತ್ತಾಯ ಮಾಡಿ ಪತ್ರ ಬರೆಸಿಕೊಂಡಿದ್ದರು. ಆದರೆ, ಶುಕ್ರವಾರ ಮತ್ತೊಂದು ಪರೀಕ್ಷೆಗೆ ಇದೇ ವಿದ್ಯಾರ್ಥಿ ಹಾಜರಾದ ಸಂದರ್ಭದಲ್ಲಿ ಅದೇ ಕಾಲೇಜು ಸಿಬ್ಬಂದಿ ಪೋಷಕರಿಗೆ ಕ್ಷಮೆ ಕೇಳಿ, ಜನಿವಾರ ಹಾಕಿಕೊಂಡು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ ಅವರು ವಿದ್ಯಾರ್ಥಿಯ ಪೋಷಕರೊಂದಿಗೆ ಪೊಲೀಸ್ ಆಯುಕ್ತ
ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದರು. ಈ ಮಧ್ಯೆ ಪರೀಕ್ಷಾ ಪ್ರಾಧಿಕಾರಕ್ಕೂ ದೂರು ಸಲ್ಲಿಸಲಾಗಿತ್ತು. ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಡಿಸಿಗೆ ಪರೀಕ್ಷಾ ಪ್ರಾಧಿಕಾರ ಪತ್ರ ಬರೆದಿದ್ದು, ಏ.೨೩ರಂದು ಕೆಲವು ಅಭ್ಯರ್ಥಿಗಳ ಜನಿವಾರವನ್ನು ತೆಗೆಸಲು ಸಿಬ್ಬಂದಿ ಸೂಚಿಸಿರುತ್ತಾರೆ. ಕೂಡಲೇ ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿತ್ತು.ನಂತರ ಆ ಮೂವರು ಸಿಬ್ಬಂದಿಯನ್ನು ವಶಕ್ಕೆ ಪಡೆದ ಪೊಲೀಸರು
ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದಾರೆ.
ವಸ್ತç ಸಂಹಿತೆ ಬಗ್ಗೆ ಅರಿವು ಮೂಡಿಸಿದ್ದರೂ ಮೂಗುತಿ, ಓಲೆ, ಜನಿವಾರದಂತಹ ಸಣ್ಣ ಪುಟ್ಟ ವಿಷಯಗಳಲ್ಲೂ ಸಿಬ್ಬಂದಿ ಕ್ರಮಕ್ಕೆ ಮುಂದಾಗಿದ್ದಾರೆ. ಈ ವಿಷಯದಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗಮನಿಸಿ ಕ್ರಮ ಕೈಗೊಳ್ಳಲಿದೆ ಎಡನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ರವರು ತಿಳಿಸಿದ್ದಾರೆ.
ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಕೃಪಾನಿಧಿ ಕಾಲೇಜಿನ ಸುಧಾಕರ್, ಗಿರಿಜಮ್ಮ, ಆರ್.ಸರಿತಾ ಅವರನ್ನು ಪ್ರಾಂಶುಪಾಲರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.


