ಬೆಂಗಳೂರು : ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಲಡ್ಡು ಪ್ರಸಾದ ತಯಾರಿಕೆಗಾಗಿ ಕೆಎಂಎಫ್‌ನಿಂದ ನಂದಿನಿ ತುಪ್ಪ ಸರಬರಾಜಾಗುತ್ತಿದ್ದು, ಇದೀಗ ಹೆಚ್ಚುವರಿ 2೦೦೦ ಟನ್ ತುಪ್ಪ ರವಾನೆ ಮಾಡುವಂತೆ ಟಿಟಿಡಿ ಬೇಡಿಕೆ ಸಲ್ಲಿಸಿದೆ.
ತಿರುಪತಿಯಲ್ಲಿ ಈ ಹಿಂದೆ ಬೇರೆ ಸಂಸ್ಥೆಗಳ ತುಪ್ಪ ಬಳಸಿ ಲಡ್ಡು ತಯಾರಿಸಲಾಗುತ್ತಿತ್ತು. ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವಿದೆ ಎಂಬುದು ವಿವಾದದ ವಿಚಾರವಾದ ನಂತರ ತಿರುಪತಿಯಲ್ಲಿ ಲಡ್ಡು ತಯಾರಿಕೆಗಾಗಿ ಕೆಎಂಎಫ್ ನಂದಿನಿ ತುಪ್ಪವನ್ನು ಮಾತ್ರ ಬಳಸಲಾಗುತ್ತಿದೆ. ಇದರ ಹೊರತಾಗಿ ಬೇರೆ ಯಾವುದೇ ತುಪ್ಪವನ್ನು ಬಳಸುತ್ತಿಲ್ಲ. ಈಗ ಯುಗಾದಿ ಹಬ್ಬ ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮಹಾ ಪ್ರಸಾದವಾಗಿರುವ ಲಡ್ಡು ತಯಾರಿಕೆಗಾಗಿ ತುರ್ತು ೨ ಸಾವಿರ ಟನ್ ತುಪ್ಪವನ್ನು ಕಳುಹಿಸಿಕೊಡುವಂತೆ ಟಿಟಿಡಿ ಆಡಳಿತ ಮಂಡಳಿ ಕೆಎಂಎಫ್‌ಗೆ ಬೇಡಿಕೆ ಸಲ್ಲಿಸಿ, ಈ ತಿಂಗಳೊಳಗೆ ಸರಬರಾಜು ಮಾಡುವಂತೆ ತಿಳಿಸಿದೆ.
ಸತತವಾಗಿ ಕೆಎಂಎಫ್‌ನ ನಂದಿನಿ ತುಪ್ಪಕ್ಕೆ ಮಾತ್ರ ಟಿಟಿಡಿ ಟೆಂಡರ್ ಕೊಡುತ್ತ ಬಂದಿದೆ. ಈ ಮೊದಲು ತಿಮ್ಮಪ್ಪನ ಸನ್ನಿಧಾನಕ್ಕೆ ಎರಡು ದಿನಕ್ಕೆ ಒಮ್ಮೆ ತುಪ್ಪ ರವಾನೆಯಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿ ದಿನವೂ ತುಪ್ಪ ರವಾನೆಯಾಗುತ್ತಿದೆ. ಈ ವರ್ಷ 5 ಸಾವಿರ ಟನ್ ತುಪ್ಪವನ್ನು ರವಾನಿಸುವಂತೆ ಟಿಟಿಡಿ ಕೆಎಂಎಫ್‌ಗೆ ಬೇಡಿಕೆ ಇಟ್ಟಿದ್ದು, ಈಗಾಗಲೇ 600 ಟನ್ ತುಪ್ಪ ಕಳುಹಿಸಿಕೊಡಲಾಗಿದೆ. ಬೇಸಿಗೆ ಕಾಲವಾಗಿರುವುದರಿಂದ ಹಾಲಿನ ಸಂಗ್ರಹದಲ್ಲಿಯೂ ಕುಸಿತ ಕಂಡಿದ್ದು, ಸಂಗ್ರಹವಿರುವ ಬೆಣ್ಣೆಯಲ್ಲಿ ಶೀಘ್ರ ತುಪ್ಪ ತಯಾರಿಕೆ ಮಾಡುವಂತೆ ಕೆಎಂಎಫ್ ಹಾಲು ಘಟಕಗಳಿಗೆ ಸೂಚನೆ ರವಾನೆ ಮಾಡಿದೆ.