ಬಿಷ್ಕಕ್ : ಉಕ್ರೇನ್–ರಷ್ಯಾ ಯುದ್ಧಕ್ಕೆ ಅಂತ್ಯ ಹಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಸಮ್ಮುಖದಲ್ಲೇ ಯುದ್ಧದ ವಿರುದ್ಧ ಶಾಂತಿಯ ಸಂದೇಶ ಸಾರಿದ್ದಾರೆ.
ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ನೇಪಥ್ಯದಲ್ಲಿ ಪುತಿನ್ ಅವರನ್ನು ಭೇಟಿಯಾದ ಮೋದಿ, ಉಕ್ರೇನ್ ವಿಚಾರವಾಗಿ ಭಾರತ ನಿರಂತರವಾಗಿ ಚರ್ಚೆ ನಡೆಸುತ್ತಿದೆ ಎಂದು ಹೇಳಿದರು.
“ಯುದ್ಧದಿಂದ ಮಾನವಕುಲದ ಪ್ರಗತಿ ಹಿಂದಕ್ಕೆ ಸಾಗುತ್ತದೆ. ಮಾನವೀಯತೆ ಮತ್ತು ಜಾಗತಿಕ ಕಲ್ಯಾಣಕ್ಕಾಗಿ ಯುದ್ಧಗಳು ಅಂತ್ಯಗೊಳ್ಳಬೇಕು” ಎಂದು ಮೋದಿ ಪ್ರತಿಪಾದಿಸಿದರು.
ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳಿಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ. ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಭಾರತ ತನ್ನಿಂದಾದ ನೆರವು ನೀಡಲಿದೆ ಎಂದು ಪುತಿನ್‌ಗೆ ಮೋದಿ ಭರವಸೆ ನೀಡಿದರು.
ಶೀಘ್ರ ಭಾರತಕ್ಕೆ ಪುತಿನ್ : ಭಾರತ–ರಷ್ಯಾ ನಡುವಿನ ಆರ್ಥಿಕ ಸಂಬಂಧ ಮತ್ತಷ್ಟು ಬಲಗೊಂಡಿರುವುದನ್ನು ಮೋದಿ ಉಲ್ಲೇಖಿಸಿದರು. ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ಪುತಿನ್ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದರು.
ಇರಾನ್ ಅಧ್ಯಕ್ಷರಿಗೂ ಮೋದಿ ಶಾಂತಿ ಸಂದೇಶ ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯನ್ ಅವರನ್ನು ಭೇಟಿಯಾದ ಮೋದಿ, ಸಂಘರ್ಷಗಳನ್ನು ರಾಜತಾಂತ್ರಿಕ ಮಾರ್ಗದ ಮೂಲಕ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದರು.
ಭಾರತ–ಇರಾನ್ ವ್ಯಾಪಾರ ಸಂಬಂಧ ವಿಸ್ತರಣೆ, ನೌಕಾಯಾನ ಸ್ವಾತಂತ್ರ್ಯ, ನಾಗರಿಕ ಮೂಲಸೌಕರ್ಯ ಹಾಗೂ ನಾವಿಕರ ಸುರಕ್ಷತೆ ಸೇರಿದಂತೆ ಹಲವು ವಿಚಾರಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು.

