Monday, July 27, 2026
Homeರಾಜಕೀಯಬನವಾಸಿ : ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕಾದವರಿಂದ ಸೋಲಿಸುವ ಯತ್ನ: ಶಾಸಕ ಶಿವರಾಮ ಹೆಬ್ಬಾರ್.

ಬನವಾಸಿ : ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕಾದವರಿಂದ ಸೋಲಿಸುವ ಯತ್ನ: ಶಾಸಕ ಶಿವರಾಮ ಹೆಬ್ಬಾರ್.

ಬನವಾಸಿ: ಬನವಾಸಿ ವಿಧಾನ ಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರುತ್ತಾರೆಂಬ ವದಂತಿ ಕಳೆದ 2-3 ದಿನಗಳಿಂದ ಕ್ಷೇತ್ರದಲ್ಲಿ ಸಂಚಲನವನ್ನು ಮೂಡಿಸಿದೆ. ಈ ನಡುವೆ ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಹಾಗೂ ಮುಖಂಡರ ವಿರುದ್ಧ ಶಾಸಕ ಶಿವರಾಮ್ ಹೆಬ್ಬಾರ್ ಮಾಧ್ಯಮದವರೆದುರು ಅಸಮಾಧಾನ ಹೊರಹಾಕಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಪದಾಧಿಕಾರಿಗಳು, ಮುಖಂಡರೇ ನನ್ನನ್ನು ಸೋಲಿಸಲು ಪ್ರಯತ್ನ ನಡೆಸಿರುವುದು ಬಹಿರಂಗ ಸತ್ಯ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕಾದವರೇ ಸೋಲಿಸುವ ಯತ್ನ ನಡೆಸಿರುವುದು ಹೆಬ್ಬಾರ್ ಆಕ್ರೋಶಕ್ಕೆ ಕಾರಣವಾಗಿದೆ.
ಫಲಿತಾಂಶ ಬಂದು ಕೆಲವೇ ದಿನಗಳಲ್ಲಿ ಪಕ್ಷದ ಹಿರಿಯರಿಗೆ ಈ ಕುರಿತು ಹೆಬ್ಬಾರ್ ಪತ್ರದ ಮೂಲಕ ದೂರಿದ್ದರು. ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು.‌ ಪತ್ರ ಬರೆದು ಮೂರು ತಿಂಗಳುಗಳೇ ಕಳೆದರೂ ಯಾವುದೇ ಕ್ರಮ ಆಗದೇ ಇರುವುದು ಅಸಮಾಧಾನ ಹೆಚ್ಚಲು ಕಾರಣವಾಗಿದೆ.

ಮೂಲ-ವಲಸಿಗ ಗುದ್ದಾಟ ನಿರಂತರ:

ಮೂರೂವರೆ ವರ್ಷಗಳ ಹಿಂದೆ ಹೆಬ್ಬಾರ್ ಅವರು ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ದಿನದಿಂದಲೂ ಮೂಲ ಬಿಜೆಪಿಗರು, ವಲಸಿಗರ ನಡುವೆ ಆಂತರಿಕ ಕಿತ್ತಾಟ ಇದ್ದೇ ಇತ್ತು. ಚುನಾವಣೆಯ ಸಂದರ್ಭದಲ್ಲಿ ಈ ಅಂತರ, ಭಿನ್ನಮತ ಹೆಚ್ಚಾಗಿತ್ತು. ಅನೇಕ ಬಿಜೆಪಿ ಮುಖಂಡರು, ಪಕ್ಷದ ತಾಲೂಕು ಅಧ್ಯಕ್ಷರಾದಿಯಾಗಿ ಹೆಬ್ಬಾರ್ ಸೋಲಿನ ಸಂಕಲ್ಪದೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು ಗುಟ್ಟಾಗಿ ಉಳಿದಿಲ್ಲ. ಇದೇ ಕಾರಣಕ್ಕಾಗಿ ವಿಧಾನಸಭಾ ಚುನಾವಣೆಯ ನಂತರ ಪಕ್ಷ ಸಂಘಟನೆ ವಿಚಾರದಲ್ಲಿ ಹೆಬ್ಬಾರ್ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಇತ್ತೀಚೆಗಷ್ಟೇ ನಡೆದ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲೂ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೇರಿದವರನ್ನು ಬಿಜೆಪಿ ಬೆಂಬಲಿತರೆಂದು ಹೇಳಿಕೊಳ್ಳದೇ, ಹೆಬ್ಬಾರ್ ಬೆಂಬಲಿತರೆಂದೇ ಬಿಂಬಿಸಲಾಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸರ್ಕಾರದ ವಿರುದ್ಧ ಶಾಸಕರು ಅಷ್ಟಾಗಿ ಮಾತನಾಡಿಲ್ಲ. ಚುನಾವಣೆಯ ನಂತರ ತಮ್ಮ ನಡೆಯ ಮೂಲಕ ಪಕ್ಷದ ಸ್ಥಳೀಯ ಮುಖಂಡರ ವಿರುದ್ಧದ ಅಸಮಾಧಾನ ತೋರ್ಪಡಿಸಿಕೊಂಡಿದ್ದ ಹೆಬ್ಬಾರ್, ಇದೀಗ ನೇರವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಸಹಿಸಿಕೊಂಡು ಇರಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪಕ್ಷದ ಪ್ರಮುಖರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
‌ ನಮ್ಮ ವಿಷಯದಲ್ಲಿ ರಾಜ್ಯ, ರಾಷ್ಟ್ರದ ನಾಯಕರು ನುಡಿದಂತೆ ನಡೆದಿದ್ದಾರೆ.‌ ಅವರ ಬಗ್ಗೆ ಯಾವ ಬೇಸರವೂ ಇಲ್ಲ, ಸ್ಥಳೀಯ ಪದಾಧಿಕಾರಿಗಳು, ಮುಖಂಡರ ನಡೆಯಿಂದಲೇ ಬೇಸತ್ತಿದ್ದೇನೆ. ಇವತ್ತು ನಾನು ಬಿಜೆಪಿಯಲ್ಲೇ ಇದ್ದೇನೆ, ಬಿಜೆಪಿಯ ಶಾಸಕನಾಗಿಯೇ ಇದ್ದೇನೆ, ಬಿಜೆಪಿ ಶಾಸಕನಾಗಿಯೇ ಇರುತ್ತೇನೆ’ ಎಂದು ಹೆಬ್ಬಾರ್ ಹೇಳುತ್ತಿದ್ದಾರೆ. ಪಕ್ಷದ ಮುಖಂಡರು ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇದ್ದರೆ ಮುಂದೇನು ಎಂಬ ಪ್ರಶ್ನೆಗೆ, ‘ಆದರೆ, ಹೋದರೆ ಎಂಬ ವಿಚಾರ ಬೇಡ. ಪ್ರಸ್ತುತ ಸ್ಥಿತಿ ಏನಿದೆಯೋ ಅದು ಮಾತ್ರ ಸತ್ಯ’ ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಡುತ್ತಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಶಾಸಕರ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತವಾಗಿದೆ. ಮೊದಲಿಗೆ ಅವರ ಬೆಂಬಲಿಗರು, ಪ.ಪಂ, ಗ್ರಾ.ಪಂ ಸದಸ್ಯರು ಪಕ್ಷ ತೊರೆದು ಕಾಂಗ್ರೆಸ್ ಸೇರಲಿದ್ದು, ಒಂದೆರಡು ತಿಂಗಳು ಕಳೆದ ನಂತರ ಹೆಬ್ಬಾರ್ ಸೇರಲಿದ್ದಾರೆ ಎಂಬುದು ಹೆಬ್ಬಾರ್ ಆಪ್ತವಲಯದವರ ಮಾತಾಗಿದೆ.

ಮುಂದಿನ ಲೆಕ್ಕಾಚಾರ:
ಹೆಬ್ಬಾರ್ ಕಾಂಗ್ರೆಸ್ ಸೇರಿದರೆ ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲಗೆ ಟಿಕೆಟ್ ನೀಡುವುದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶಿವರಾಮ ಹೆಬ್ಬಾರ್ ಗೆ ಟಿಕೆಟ್ ನೀಡುವುದು ಹಾಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೆಬ್ಬಾರ್ ಪುತ್ರ ವಿವೇಕ ಹೆಬ್ಬಾರ್ ಅವರನ್ನು ಕಾಂಗ್ರೆಸ್ ನಿಂದ ಕಣಕ್ಕಿಳಿಸುವ ದೂರದೃಷ್ಟಿ ಹೊಂದಿ ಈ ಎಲ್ಲ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಹೆಬ್ಬಾರ್ ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದಾರೆ ಎಂದೂ ಆಪ್ತರು ಆಡಿಕೊಳ್ಳುತ್ತಿದ್ದಾರೆ. ಆದರೆ ಹೆಬ್ಬಾರ್ ಸ್ಪಷ್ಟವಾಗಿ ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ. ಹಾಗಾಗಿ ಕುತೂಹಲ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular