ಪುತ್ತೂರು ; ಜೀವನದಲ್ಲಿ ಅಪಾರ ಸಂಕಷ್ಟ ಎದುರಿಸುತ್ತಿದ್ದ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಬಳಿ ವಾಸವಾಗಿರುವ ಹಿರಿಯ ನಿವೃತ್ತ ಟೈಲರ್ ಆನಂದ ಟೈಲರ್ (72) ಅವರು ಕೇರಳ ರಾಜ್ಯದ ಕಾರುಣ್ಯ ಲಾಟರಿಯ ಪ್ರಥಮ ಬಹುಮಾನ 80 ಲಕ್ಷ ರೂ ಪಡೆದಿದ್ದಾರೆ.
ಆನಂದ ರವರು 30 ವರ್ಷಕ್ಕೂ ಹೆಚ್ಚು ಕಾಲ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಒಂದು ಅವಧಿಗೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಉಪಾಧ್ಯಕ್ಷರೂ ಆಗಿದ್ದರು. ಆದಾಗ್ಯೂ, ಅವರು ತಮ್ಮ ಕಾಲಿನ ಅನಾರೋಗ್ಯದ ಕಾರಣ ತಮ್ಮ ವೃತ್ತಿಯನ್ನು ತ್ಯಜಿಸಬೇಕಾಯಿತು.
ಆವರ ಪತ್ನಿ ಗೃಹಿಣಿ. ಅವರಿಗೆ ಒಬ್ಬ ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಕೇರಳದ ನೀಲೇಶ್ವರನಿಗೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಇಬ್ಬರು ಗಂಡು ಮಕ್ಕಳು ಕೆಲಸ ಮಾಡುತ್ತಿದ್ದು, ಕುಟುಂಬದ ಆಧಾರ ಸ್ತಂಭವಾಗಿದ್ದರು.
ಆವರಿಗೆ ಲಾಟರಿ ಟಿಕೆಟ್ ಕೊಳ್ಳುವ ಚಟ ಇರಲಿಲ್ಲ. ಒಮ್ಮೊಮ್ಮೆ ಕೇರಳದಲ್ಲಿರುವ ಮಗಳ ಮನೆಗೆ ಭೇಟಿ ನೀಡಿದಾಗ ಕೇರಳ ರಾಜ್ಯದ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಅದೇ ರೀತಿ ಕಳೆದ ವಾರ ಮಗಳ ಮನೆಗೆ ಹೋಗಿದ್ದ ಅವರು ಕಾರುಣ್ಯ ಟಿಕೆಟ್ ಖರೀದಿಸಿ ಏಪ್ರಿಲ್ 15 ರಂದು ನಡೆದ ಡ್ರಾದಲ್ಲಿ ಪ್ರಥಮ ಬಹುಮಾನ 80 ಲಕ್ಷ ರೂ.ಗಳನ್ನು ಗೆದ್ದುಕೊಂಡಿದ್ದರು. ತೆರಿಗೆ ಕಡಿತಗೊಳಿಸಿ 56 ಲಕ್ಷ ರೂ ಅವರಿಗೆ ಸಿಕ್ಕಿದೆ.