ನವದೆಹಲಿ : ಇಸ್ರೇಲ್–ಅಮೆರಿಕ–ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಅಸ್ಥಿರತೆ ಉಂಟಾಗಿದ್ದು, ಇದರ ಪರಿಣಾಮವಾಗಿ ಭಾರತೀಯ ತೈಲೋದ್ಯಮಕ್ಕೆ ಪ್ರತಿದಿನ ₹1,600 ರಿಂದ ₹1,700 ಕೋಟಿ ನಷ್ಟವಾಗುತ್ತಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಕಳೆದ 10 ವಾರಗಳಲ್ಲಿ ಒಟ್ಟು ನಷ್ಟವು ಸುಮಾರು ₹1 ಲಕ್ಷ ಕೋಟಿಯನ್ನು ದಾಟಿದೆ ಎನ್ನಲಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೂ ಭಾರತೀಯ ಗ್ರಾಹಕರ ಮೇಲೆ ಅದರ ನೇರ ಹೊರೆ ಬೀಳದಂತೆ ತೈಲ ಕಂಪನಿಗಳು ಹೆಚ್ಚುವರಿ ವೆಚ್ಚವನ್ನು ತಾವೇ ಭರಿಸುತ್ತಿವೆ.
ಫೆಬ್ರವರಿ 28ರಂದು ಆರಂಭವಾದ ಪಶ್ಚಿಮ ಏಷ್ಯಾ ಸಂಘರ್ಷದ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ಆದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರಗಳನ್ನು ಕಳೆದ ಎರಡು ವರ್ಷಗಳಿಂದ ಬಹುತೇಕ ಸ್ಥಿರವಾಗಿಯೇ ಉಳಿಸಲಾಗಿದೆ.
ಅಂತರರಾಷ್ಟ್ರೀಯ ತೈಲ ಕಂಪನಿಗಳು ಈಗಾಗಲೇ ದರ ಹೆಚ್ಚಳ ಮಾಡಿರುವುದರಿಂದ ಭಾರತೀಯ ತೈಲ ಸಂಸ್ಥೆಗಳ ಮೇಲೂ ಆರ್ಥಿಕ ಒತ್ತಡ ಹೆಚ್ಚಾಗಿದೆ. ಜಪಾನ್, ಬ್ರಿಟನ್ ಸೇರಿದಂತೆ ಹಲವು ದೇಶಗಳು ಇಂಧನ ದರವನ್ನು ಸುಮಾರು 30% ಹೆಚ್ಚಿಸಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ದರ ಏರಿಕೆ ಅನಿವಾರ್ಯವಾಗಬಹುದು ಎಂದು ತೈಲ ಕಂಪನಿಗಳು ಸೂಚಿಸಿವೆ.
ಇದುವರೆಗೆ ವಿವಿಧ ಚುನಾವಣೆಗಳ ಹಿನ್ನೆಲೆ ಕೇಂದ್ರ ಸರ್ಕಾರ ಇಂಧನ ದರ ಏರಿಕೆಯನ್ನು ಮುಂದೂಡುತ್ತಾ ಬಂದಿತ್ತು. ಆದರೆ ಯುದ್ಧ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ದರ ಏರಿಕೆ ಸಾಧ್ಯತೆ ಹೆಚ್ಚಿದೆ ಎಂದು ತೈಲೋದ್ಯಮ ವಲಯದಲ್ಲಿ ಚರ್ಚೆಯಾಗುತ್ತಿದೆ.


