ತುಮಕೂರು : ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಪರಮಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ನೂತನ ಮುಖ್ಯಮಂತ್ರಿ D. K. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಡಿ.ಕೆ. ಶಿವಕುಮಾರ್ ಅವರ 40 ವರ್ಷಗಳ ರಾಜಕೀಯ ಹೋರಾಟ, ಪಕ್ಷನಿಷ್ಠೆ ಹಾಗೂ ಕಾಂಗ್ರೆಸ್ ಪಕ್ಷದ ಸಂಕಷ್ಟದ ಸಂದರ್ಭದಲ್ಲಿ ಬಂಡೆಯಂತೆ ನಿಂತ ಸೇವೆಯನ್ನು ಶ್ರೀಗಳು ಸ್ಮರಿಸಿದರು. ವಿದ್ಯಾರ್ಥಿ ಜೀವನದಿಂದಲೇ ಹೋರಾಟದ ಹಾದಿಯಲ್ಲಿ ಸಾಗಿದ ಅವರು ಶಾಸಕ, ಸಚಿವ ಹಾಗೂ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ ಎಂದು ಹೇಳಿದರು.
“ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ” ಎಂಬ ಮಾತನ್ನು ಸದಾ ಹೇಳುತ್ತಿದ್ದ ಡಿಕೆಶಿ ಇಂದು ಮುಖ್ಯಮಂತ್ರಿ ಸ್ಥಾನಕ್ಕೇರಿರುವುದು ಹೆಮ್ಮೆಯ ವಿಷಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ರಾಜ್ಯದ ಅಭಿವೃದ್ಧಿ, ಎಲ್ಲಾ ಸಮುದಾಯಗಳ ವಿಶ್ವಾಸ ಗಳಿಸುವ ಆಡಳಿತ ಹಾಗೂ ಜನಪರ ಕಾರ್ಯಗಳನ್ನು ಅವರು ಕೈಗೊಳ್ಳುವ ವಿಶ್ವಾಸವಿದೆ ಎಂದು ಆಶೀರ್ವದಿಸಿದರು.
“ದೇವರು ಮತ್ತು ಗುರುವಿನ ಮೇಲೆ ಅಪಾರ ನಂಬಿಕೆ ಇಟ್ಟಿರುವ ವ್ಯಕ್ತಿ ಡಿಕೆ ಶಿವಕುಮಾರ್. ಜನರ ಆಶೀರ್ವಾದ ಮುಂದುವರಿದರೆ ಅವರು ಮುಂದೆಯೂ ಈ ಹುದ್ದೆಯಲ್ಲಿ ಮುಂದುವರಿಯುತ್ತಾರೆ” ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮಕ್ಕೆ ಆಹ್ವಾನ ಬಂದಿದ್ದರೂ ಶ್ರೀಮಠದಲ್ಲಿ ಮಕ್ಕಳ ದಾಖಲಾತಿ ಕಾರ್ಯಗಳಿರುವುದರಿಂದ ಪ್ರಮಾಣವಚನ ಸಮಾರಂಭಕ್ಕೆ ತೆರಳುವುದಿಲ್ಲ. ನಂತರ ಭೇಟಿ ನೀಡಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಡಿ.ಕೆ. ಶಿವಕುಮಾರ್ ಅವರು ಜೂನ್ 3, 2026ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.


