ಜಾನ್‌ಪುರ : ಉತ್ತರ ಪ್ರದೇಶದ ಜಾನ್‌ಪುರ ಜಿಲ್ಲೆಯಲ್ಲಿ ವಿಶಿಷ್ಟ ರೀತಿಯ ವಿವಾಹ ನಡೆದಿದೆ. ಇಲ್ಲಿಯ ಬಿಜೆಪಿ ನಾಯಕರೊಬ್ಬರ ಪುತ್ರ ಪಾಕಿಸ್ತಾನಿ ಯುವತಿಯನ್ನು ಆನ್‌ಲೈನ್ ನಲ್ಲಿ ವಿವಾಹವಾಗಿದ್ದಾರೆ.
ಬಿಜೆಪಿ ಕಾರ್ಪೊರೇಟರ್ ತಹಸೀನ್ ಶಾಹಿದ್ ಅವರ ಹಿರಿಯ ಪುತ್ರ ಮೊಹಮ್ಮದ್ ಅಬ್ಬಾಸ್ ಹೈದರ್ ಪಾಕಿಸ್ತಾನದ ಲಾಹೋರ್‌ನ ಆಂಡ್ಲಿಪ್ ಜಹ್ರಾ ಅವರ ವಿವಾಹ ನಿಶ್ಚಯಿಸಿದ್ದಾರೆ.ಆದರೆ ಉಭಯ ದೇಶಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ವಿವಾದಗಳಿಂದಾಗಿ, ವರ ಶಾಹಿದ್ ವೀಸಾಗಾಗಿ ಸಲ್ಲಿಸಿದ ಅರ್ಜಿಯು ವಿಫಲವಾಗಿದೆ. ಜೊತೆಗೆ ಅನಾರೋಗ್ಯದ ಕಾರಣ ವಧುವಿನ ತಾಯಿ ಐಸಿಯುಗೆ ದಾಖಲಾಗಿದ್ದು ಮದುವೆಗೆ ಇನ್ನೊಂದು ಅಡ್ಡಿಯಾಗಿದೆ. ಹೀಗಾಗಿ ಮದುವೆ ಸಮಾರಂಭವನ್ನು ಆನ್‌ಲೈನ್‌ನಲ್ಲಿ ನಡೆಸಲು ಶಾಹಿದ್ ನಿರ್ಧರಿಸಿದ್ದಾರೆ.
ಇದಕ್ಕೆ ವಧುವಿನ ಕಡೆಯವರೂ ಒಪ್ಪಿಗೆ ಸೂಚಿಸಿದ್ದಾರೆ, ಹೀಗಾಗಿ ಆನ್‌ಲೈನ್‌ನಲ್ಲಿ ವಿವಾಹ ಸಮಾರಂಭವನ್ನು ಮುಕ್ತಾಯಗೊಳಿಸಲಾಗಿದೆ. ಶುಕ್ರವಾರ ರಾತ್ರಿ ಆನ್‌ಲೈನ್‌ನಲ್ಲಿ ನಿಕಾಹ್ ಮಾಡಲಾಗಿದೆ. ಇಲ್ಲಿಯ ಶಾಹಿದ್ ಕುಟುಂಬ ಸದಸ್ಯರು ಮತ್ತು ಲಾಹೋರ್‌ನ ವಧುವಿನ ಕುಟುಂಬ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಶಿಯಾ ನಾಯಕ ಮೌಲಾನಾ ಮಹ್ಫುಜುಲ್ ಹಸನ್ ಖಾನ್ ಈ ಮದುವೆಗೆ ಪ್ರತಿಕ್ರಿಯಿಸಿದ್ದಾರೆ. ಇಸ್ಲಾಂನಲ್ಲಿ ನಿಕಾಹ್‌ಗೆ ಮಹಿಳೆಯ ಒಪ್ಪಿಗೆ ಬಹಳ ಮುಖ್ಯ ಎಂದು ಹೇಳಲಾಗುತ್ತದೆ ಮತ್ತು ಅವಳು ತನ್ನ ಒಪ್ಪಿಗೆಯನ್ನು ಮೌಲಾನಾಗೆ ತಿಳಿಸುತ್ತಾಳೆ ಎರಡೂ ಕಡೆಯ ಮೌಲಾನಾಗಳು ಒಟ್ಟಾಗಿ ಸಮಾರಂಭವನ್ನು ನಡೆಸಿದಾಗ ಆನ್‌ಲೈನ್ ನಿಕಾಹ್ ಸಾಧ್ಯ ಎಂದು ಅವರು ವಿವರಿಸಿದ್ದಾರೆ.


