ಚಿಕ್ಕಮಗಳೂರು : ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಲುಕಿರುವ ಹುಲಿಯ ಶೋಧ ಕಾರ್ಯ ಮುಂದುವರಿದಿರುವ ನಡುವೆಯೇ ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮರಾ ಟ್ರ್ಯಾಪ್‌ಗಳಲ್ಲಿ ಎರಡು ಹುಲಿಗಳು ಸೆರೆಯಾಗಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಏಳುನೂರುಖಾನ್ ಎಸ್ಟೇಟ್ ಸಮೀಪ ಅಳವಡಿಸಲಾದ ಕ್ಯಾಮರಾಗಳಲ್ಲಿ ಎರಡು ಹುಲಿಗಳ ಚಲನವಲನ ದಾಖಲಾಗಿದ್ದರೂ, ಉರುಳಿಗೆ ಸಿಲುಕಿರುವ ಹುಲಿ ಮಾತ್ರ ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಇದರಿಂದ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಎರಡು ಅಲ್ಲ, ಮೂರು ಹುಲಿಗಳು ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಇತ್ತೀಚೆಗೆ ಸಚಿವ ಕೆ.ಜೆ. ಜಾರ್ಜ್ ಅವರ ತೋಟದ ಸಮೀಪ ಉರುಳಿಗೆ ಸಿಲುಕಿದ್ದ ಹುಲಿ ಸೊಂಟದಲ್ಲಿ ಉರುಳು ಸಿಲುಕಿಸಿಕೊಂಡೇ ಅರಣ್ಯ ಪ್ರದೇಶದಲ್ಲಿ ಓಡಾಡುತ್ತಿರುವ ಶಂಕೆ ಇದೆ. ಗಾಯ ಮತ್ತು ನೋವಿನ ನಡುವೆಯೂ ಅದು ಬೇಟೆಯಾಡುತ್ತಿರುವ ಸಾಧ್ಯತೆಯನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಬೋನುಗಳನ್ನು ಅಳವಡಿಸಿದ್ದು, ಹೆಚ್ಚುವರಿ ಕ್ಯಾಮರಾಗಳ ಮೂಲಕ ನಿಗಾವಹಿಸಿದೆ. ಆದರೆ ಕ್ಯಾಮರಾಗಳಲ್ಲಿ ಉರುಳಿಗೆ ಸಿಲುಕಿದ ಹುಲಿ ಬದಲು ಬೇರೆ ಹುಲಿಗಳೇ ಸೆರೆಯಾಗಿರುವುದು ಕಾರ್ಯಾಚರಣೆಯನ್ನು ಮತ್ತಷ್ಟು ಸವಾಲಿನದಾಗಿಸಿದೆ.
ಈ ಬೆಳವಣಿಗೆಯಿಂದ ಸುತ್ತಮುತ್ತಲಿನ ತೋಟ ಕಾರ್ಮಿಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ತೋಟಗಳಿಗೆ ಕೆಲಸಕ್ಕೆ ತೆರಳಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹುಲಿಯ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಮುಂದುವರಿಸಿದೆ.

