ಚಿಕ್ಕಮಗಳೂರು : ಸೇತುವೆಗೆ ತಡೆಗೋಡೆ ಇಲ್ಲದ ಪರಿಣಾಮ ಪ್ರವಾಸಿಗರ ಕಾರೊಂದು ಸೋಮಾವತಿ ನದಿಗೆ ಬಿದ್ದ ಘಟನೆ ಕಳಸ ತಾಲೂಕಿನ ಗಣಪತಿ ಕಟ್ಟೆ ಬಳಿ ನಡೆದಿದೆ. ಬೆಂಗಳೂರು ಮೂಲದ ಪ್ರವಾಸಿ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಸೇತುವೆಯಿಂದ ನದಿಗೆ ಉರುಳಿದ್ದು, ರಭಸವಾಗಿ ಹರಿಯುತ್ತಿದ್ದ ನೀರಿನ ಮಧ್ಯೆ ಬಂಡೆಯೊಂದಕ್ಕೆ ಸಿಲುಕಿಕೊಂಡಿದೆ. ಬಂಡೆ ಅಡ್ಡ ಸಿಕ್ಕಿದ್ದರಿಂದ ಕಾರು ನೀರಿನೊಂದಿಗೆ ಕೊಚ್ಚಿಹೋಗದೆ ದಂಪತಿಗಳ ಜೀವ ಉಳಿದಿದೆ. ಕಾರು ನದಿಗೆ ಬೀಳುತ್ತಿದ್ದಂತೆ ಸ್ಥಳೀಯರು ಕೂಡಲೇ ಕಾರ್ಯಾಚರಣೆ ನಡೆಸಿ ದಂಪತಿಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ತಡೆಗೋಡೆ ಇಲ್ಲದ ಸೇತುವೆ ಬಗ್ಗೆ ಆಕ್ರೋಶ ಗಣಪತಿ ಕಟ್ಟೆ ಬಳಿ ಸೇತುವೆಗೆ ಸೂಕ್ತ ತಡೆಗೋಡೆ ಇಲ್ಲದಿರುವುದರಿಂದ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವರ್ಷಕ್ಕೆ 3–4 ಅಪಘಾತಗಳು ನಡೆಯುತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದು ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ಸೇತುವೆಗೆ ತಕ್ಷಣ ತಡೆಗೋಡೆ ನಿರ್ಮಿಸಿ, ಅಪಾಯಕಾರಿ ಸ್ಥಳದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

