ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿ ತಾಲೂಕಿನ ಬೆಟ್ಟಗೆರೆ ಸಮೀಪದ ಕಲ್ಲೊಳ್ಳಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದ್ದು, ಏಣಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಬಿಗಿದ ಪರಿಣಾಮ 14 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿಯನ್ನು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಪ್ತಮಿ ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಸಪ್ತಮಿ ಅಜ್ಜಿ ಮನೆಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಮನೆಯ ಹಟ್ಟದ ಮೇಲೆ ಆಟವಾಡುತ್ತಿದ್ದ ಸಪ್ತಮಿ ಕೆಳಗೆ ಇಳಿಯುವ ಸಂದರ್ಭದಲ್ಲಿ ಏಣಿಗೆ ಕಟ್ಟಿದ್ದ ಸೀರೆಯ ಹಗ್ಗ ಆಕೆಯ ಕುತ್ತಿಗೆಗೆ ಬಿಗಿದಿದೆ. ಪರಿಣಾಮ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ತಕ್ಷಣವೇ ಕುಟುಂಬಸ್ಥರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


