Saturday, October 31, 2026
Homeರಾಜಕೀಯಗುಜರಾತ್ : ಉಸಿರು ಇರುವವರೆಗೂ ರಾಷ್ಟ್ರಸೇವೆ : ಖರ್ಗೆ 'ಮೋದಿ ಕಾ ಬಾಪ್' ಹೇಳಿಕೆಗೆ ಪ್ರಧಾನಿ...

ಗುಜರಾತ್ : ಉಸಿರು ಇರುವವರೆಗೂ ರಾಷ್ಟ್ರಸೇವೆ : ಖರ್ಗೆ ‘ಮೋದಿ ಕಾ ಬಾಪ್’ ಹೇಳಿಕೆಗೆ ಪ್ರಧಾನಿ ಮೋದಿಯಿಂದ ಪರೋಕ್ಷ ತಿರುಗೇಟು!

ಗುಜರಾತ್ : ದೇಶದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ತಮ್ಮ ಕೊನೆಯ ಉಸಿರಿರುವವರೆಗೂ ಸೇವೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿವಾದಾತ್ಮಕ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಗುಜರಾತ್‌ನ ಬನಾಸಕಾಂಠಾ ಜಿಲ್ಲೆಯ ಭಿಲ್ಡಿಯಲ್ಲಿ ಶುಕ್ರವಾರ ಭಾರತ್ ಗೋವುಗಳ ತಳಿ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದರು.

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೂ ಅಗತ್ಯ ವಸ್ತುಗಳ ಕೊರತೆಯಿಲ್ಲ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಆರಂಭವಾದಾಗ ಭಾರತದಲ್ಲಿ ರಸಗೊಬ್ಬರ ಮತ್ತು ಅಡುಗೆ ಅನಿಲದ ಕೊರತೆ ಉಂಟಾಗಲಿದೆ ಎಂದು ಕೆಲವರು ಸುಳ್ಳು ಸುದ್ದಿಗಳನ್ನು ಹರಡಿದ್ದರು. ಆದರೆ ಕೇಂದ್ರ ಸರ್ಕಾರದ ಪರಿಣಾಮಕಾರಿ ಕ್ರಮಗಳಿಂದ ದೇಶದಲ್ಲಿ ಯಾವುದೇ ಕೊರತೆ ಉಂಟಾಗಿಲ್ಲ. ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಮುಂದುವರಿದಿದ್ದರೂ ಅದರ ಪರಿಣಾಮ ಭಾರತೀಯರಿಗೆ ತಟ್ಟದಂತೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಮೋದಿ ತಿಳಿಸಿದರು.

ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಚೀಲದ ಬೆಲೆ ಸುಮಾರು ₹3,000 ಇದ್ದರೂ ಭಾರತೀಯ ರೈತರಿಗೆ ₹300ಕ್ಕಿಂತ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಅದೇ ರೀತಿ ಡಿಎಪಿ ಗೊಬ್ಬರದ ಚೀಲ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹5,000 ಇದ್ದರೂ ರೈತರಿಗೆ ₹1,350ಕ್ಕೆ ಲಭ್ಯವಾಗುತ್ತಿದೆ ಎಂದು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಮೂಲಕ ದೇಶದ ರೈತರು ₹50 ಲಕ್ಷ ಕೋಟಿಗೂ ಅಧಿಕ ಮೊತ್ತದ ಆರ್ಥಿಕ ನೆರವು ಮತ್ತು ಉಳಿತಾಯದ ಪ್ರಯೋಜನ ಪಡೆದಿದ್ದಾರೆ. ರೈತರ ಕಲ್ಯಾಣ ಮತ್ತು ಸಬಲೀಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ಪ್ರಧಾನಿ ಹೇಳಿದರು.

ಭಾರತ್ ಪರ್ವ್ 2026 ಉದ್ಘಾಟನೆ

ಇದೇ ವೇಳೆ ಗುಜರಾತ್‌ನ ಏಕತಾ ನಗರದಲ್ಲಿ ಆಯೋಜಿಸಲಾಗಿರುವ ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಪಾರಂಪರಿಕ ಕಲೆಗಳು ಹಾಗೂ ವಿವಿಧ ರಾಜ್ಯಗಳ ಪ್ರಾದೇಶಿಕ ಆಹಾರ ಪದ್ಧತಿಗಳನ್ನು ಪರಿಚಯಿಸುವ ‘ಭಾರತ್ ಪರ್ವ್ 2026’ ವಸ್ತುಪ್ರದರ್ಶನವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

ಪ್ರದರ್ಶನದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ ಅವರು ಕರಕುಶಲ ವಸ್ತುಗಳು, ಆಟಿಕೆಗಳನ್ನು ವೀಕ್ಷಿಸಿ ಕುಶಲಕರ್ಮಿಗಳೊಂದಿಗೆ ಮಾತುಕತೆ ನಡೆಸಿದರು. ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular