ಕೋಲ್ಕತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಭಾರೀ ಸೋಲು ಅನುಭವಿಸಿದ ಬೆನ್ನಲ್ಲೇ ಪಕ್ಷದೊಳಗೆ ಭಿನ್ನಮತ ಸ್ಪೋಟಗೊಂಡಿದೆ. ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಈ ಬಾರಿ ಬಿಜೆಪಿ ಎದುರು ಅಧಿಕಾರ ಕಳೆದುಕೊಂಡಿದೆ.
ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲು ಸಜ್ಜಾಗಿರುವಾಗ, ಟಿಎಂಸಿ ನಾಯಕರು ಪಕ್ಷದ ಸೋಲಿಗೆ ಮಮತಾ ಬ್ಯಾನರ್ಜಿ ಅವರ ಏಕಪಕ್ಷೀಯ ನಿರ್ಧಾರಗಳು ಮತ್ತು ಭ್ರಷ್ಟಾಚಾರದ ಆರೋಪಗಳೇ ಕಾರಣ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟೆಯಾದ ಭವಾನಿಪುರ ಕ್ಷೇತ್ರದಲ್ಲೇ ಸೋತಿರುವುದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸೋಲಿನ ಬಳಿಕವೂ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಘೋಷಿಸಿರುವುದು ಪಕ್ಷದೊಳಗಿನ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.
ಪಕ್ಷದೊಳಗೆ ಎದ್ದಿರುವ ಅಸಮಾಧಾನವನ್ನು ನಿಯಂತ್ರಿಸಲು ಮಮತಾ ಬ್ಯಾನರ್ಜಿ ಶಿಸ್ತು ಸಮಿತಿಯನ್ನು ರಚಿಸಿದ್ದಾರೆ. ಆದರೆ “ಸೋಲಿನ ಹೊಣೆ ಹೊತ್ತು ನಾಯಕತ್ವ ಬದಲಾಗಬೇಕು” ಎಂಬ ಒತ್ತಾಯ ಟಿಎಂಸಿ ಒಳಗೇ ಗಟ್ಟಿಯಾಗುತ್ತಿದೆ ಎನ್ನಲಾಗಿದೆ.
ಚುನಾವಣಾ ಸೋಲಿನ ಬಳಿಕ ಪಕ್ಷದ ಶಿಸ್ತು ಉಲ್ಲಂಘನೆ ಆರೋಪದ ಮೇರೆಗೆ ಟಿಎಂಸಿ ಮೂವರು ವಕ್ತಾರರನ್ನು ಅಮಾನತು ಮಾಡಿದೆ. ಈ ಕ್ರಮ ಪಕ್ಷದೊಳಗಿನ ಅಸಮಾಧಾನವನ್ನು ಇನ್ನಷ್ಟು ತೀವ್ರಗೊಳಿಸಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.


