Tuesday, October 27, 2026
Homeಜಿಲ್ಲೆಉಡುಪಿ : ಶಿಪ್‌ಯಾರ್ಡ್‌ನಿಂದ ನಾರ್ವೆಗೆ 2ನೇ ಹಡಗು ಹಸ್ತಾಂತರ; 3ನೇ ಹಡಗಿನ ನಿರ್ಮಾಣಕ್ಕೆ ಚಾಲನೆ..!

ಉಡುಪಿ : ಶಿಪ್‌ಯಾರ್ಡ್‌ನಿಂದ ನಾರ್ವೆಗೆ 2ನೇ ಹಡಗು ಹಸ್ತಾಂತರ; 3ನೇ ಹಡಗಿನ ನಿರ್ಮಾಣಕ್ಕೆ ಚಾಲನೆ..!

ಉಡುಪಿ : ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಿಂದ ನಾರ್ವೆಯ ಬರ್ಗೆನ್ ಮೂಲದ ವಿಲ್ಸನ್ ಎಎಸ್‌ಎ ಸಂಸ್ಥೆಗೆ ಎರಡನೇ ಸರಕು ಸಾಗಣೆ ಹಡಗನ್ನು ಸೋಮವಾರ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಒಪ್ಪಂದದ ಮೂರನೇ ಹಡಗಿನ ನಿರ್ಮಾಣ ಕಾರ್ಯಕ್ಕೆ ಕೀಲು ಸ್ಥಾಪನೆ ನೆರವೇರಿಸಲಾಯಿತು.

ಕೇಂದ್ರ ಸರಕಾರದ ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯದ ಅಧೀನದಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಈ ಮಹತ್ವದ ಸಾಧನೆ ಮಾಡಿದೆ.

ವಿಲ್ಸನ್ ಸಂಸ್ಥೆಗೆ ಒಟ್ಟು ಎಂಟು ಹಡಗುಗಳನ್ನು ನಿರ್ಮಿಸಿ ಹಸ್ತಾಂತರಿಸುವ ಯೋಜನೆಯಡಿ, ಪ್ರತಿಯೊಂದು ಹಡಗು 6,300 ಡೆಡ್‌ವೈಟ್ ಟನ್ ಸಾಮರ್ಥ್ಯ ಹೊಂದಿದೆ. ಈಗಾಗಲೇ ಮೊದಲ ಹಡಗನ್ನು ಹಸ್ತಾಂತರಿಸಲಾಗಿದ್ದು, ಇದೀಗ ಎರಡನೇ ಹಡಗಿನ ಹಸ್ತಾಂತರವೂ ಪೂರ್ಣಗೊಂಡಿದೆ.

ಡಚ್ ವಿನ್ಯಾಸ ಸಂಸ್ಥೆ ಕೋನೊಶಿಪ್ ಇಂಟರ್‌ನ್ಯಾಶನಲ್ ಬಿ.ವಿ. ಈ ಹಡಗನ್ನು ವಿನ್ಯಾಸಗೊಳಿಸಿದೆ. 99 ಮೀಟರ್ ಉದ್ದ ಹಾಗೂ 15.85 ಮೀಟರ್ ಅಗಲ ಹೊಂದಿರುವ ಹಡಗು 3,16,278 ಘನ ಅಡಿ ಸರಕು ಸಂಗ್ರಹ ಸಾಮರ್ಥ್ಯ ಹೊಂದಿದೆ. ಡೀಸೆಲ್ ಮತ್ತು ವಿದ್ಯುತ್ ಚಾಲಿತ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಹಡಗು ಪರಿಸರ ಸ್ನೇಹಿ ಹಾಗೂ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಡೆದ ಸಮಾರಂಭದಲ್ಲಿ ವಿಲ್ಸನ್ ಎಎಸ್‌ಎ ಅಧ್ಯಕ್ಷ ಐವಿಂಡ್ ಐಡೆಸ್ಟಿಕ್ ಅವರು ತಮ್ಮ ಪುತ್ರಿ ಅನ್ನಾ ಐಡೆಸ್ಟಿಕ್ ಅವರೊಂದಿಗೆ ಹಡಗನ್ನು ಸ್ವೀಕರಿಸಿದರು. ಹಡಗಿಗೆ ‘ವಿಲ್ಸನ್ ಎನರ್ಜಿ’ ಎಂದು ನಾಮಕರಣ ಮಾಡಲಾಯಿತು. ಸಂಪ್ರದಾಯದಂತೆ ಧಾರ್ಮಿಕ ಪೂಜೆ ಹಾಗೂ ಮಂತ್ರಪಠಣ ನಡೆಯಿತು.

ಭಾರತದಲ್ಲಿನ ನಾರ್ವೆ ರಾಯಭಾರಿ ಮೇ-ಎಲಿನ್ ಸ್ಪೆನರ್ ಅವರು ಮೂರನೇ ಹಡಗಿನ ನಿರ್ಮಾಣಕ್ಕೆ ಕೀಲು ಸ್ಥಾಪನೆ ನೆರವೇರಿಸಿದರು. ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯದ ಕಾರ್ಯದರ್ಶಿ ವಿಜಯ್ ಕುಮಾರ್ ಅವರು ವರ್ಚುವಲ್ ಮೂಲಕ ಶುಭ ಹಾರೈಸಿದರು.

ಕೊಚ್ಚಿನ್ ಶಿಪ್‌ಯಾರ್ಡ್ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಡಾ. ಎಸ್. ಹರಿಕೃಷ್ಣನ್ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನ ಸಿಇಒ ಹರಿಕುಮಾರ್ ಎ. ಸ್ವಾಗತಿಸಿ ಪ್ರಸ್ತಾವನೆಗೈದರು. ಡಿಜಿಎಂ ಹರಿಕೃಷ್ಣ ಇ.ಎಸ್. ವಂದಿಸಿದರು.

ನಾರ್ವೆ ರಾಯಭಾರ ಕಚೇರಿಯ ದ್ವಿತೀಯ ಕಾರ್ಯದರ್ಶಿ ಹೈನೆ ಟಾಫ್ಟ್ ನಾರ್ಡಾಲ್, ಇನ್ನೋವೇಶನ್ ನಾರ್ವೆಯ ಬ್ಯಾರ್ನ್ ಐವರ್ಸನ್, ಆರ್ಕ್‌ಟಿಕ್ ಶಿಪ್ಪಿಂಗ್‌ನ ಕ್ರಿಶ್ಚಿಯನ್ ಬಾರ್ಟ್‌ಜ್, ಕೋನೊಶಿಪ್ ಇಂಟರ್‌ನ್ಯಾಶನಲ್‌ನ ಮಾರ್ಟಿನ್ ಸಿಕ್ಸರ್ ಸೇರಿದಂತೆ ವಿಲ್ಸನ್ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಕೊಚ್ಚಿನ್ ಶಿಪ್‌ಯಾರ್ಡ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ತಿಳಿಸಿರುವಂತೆ, ಉಳಿದ ಆರು ಹಡಗುಗಳನ್ನು 2028ರ ಮಾನ್ಸೂನ್ ವೇಳೆಗೆ ವಿಲ್ಸನ್ ಸಂಸ್ಥೆಗೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯು ಹಡಗು ನಿರ್ಮಾಣ ಕ್ಷೇತ್ರದಲ್ಲಿ ಉಡುಪಿ ಶಿಪ್‌ಯಾರ್ಡ್‌ನ ಬೆಳವಣಿಗೆಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular