ಅಯೋಧ್ಯೆ : ದೇಶದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲು ಸಜ್ಜಾಗುತ್ತಿದ್ದು ದೇಶದ ಹಿಂದೂಬಾಂದವರು ಆ ಶುಭ ದಿನಕ್ಕಾಗಿ ಕಾಯುತ್ತ ಇರುವುದಂತೂ ಸತ್ಯ. ಅಯೋಧ್ಯೆ ಯಲ್ಲಿ ಜನವರಿ 22ರಂದು ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು ,ಹೈ ಅಲರ್ಟ್ ಹಾಗೂ ಹೈ ಸೆಕ್ಯೂರಿಟಿ ಇದ್ದು ಪ್ರತಿಯೊಂದು ಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಗುರುವಾರ, ಜನವರಿ 19 ರಂದು, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಯೋಧ್ಯೆಯಲ್ಲಿ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿದೆ.
ರಾಜ್ಯ ಭಯೋತ್ಪಾದನಾ ನಿಗ್ರಹ ದಳವು ಮೂವರು ಶಂಕಿತ ಜನರನ್ನು ವಶಕ್ಕೆ ತೆಗೆದುಕೊಂಡು ಈ ಶಂಕಿತರ ವಿಚಾರಣೆ ನಡೆಸಲಾಗುತ್ತಿದೆ ಎಂದು ಉತ್ತರ ಪ್ರದೇಶದ ವಿಶೇಷ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು ಡ್ರೋನ್‌ಗಳ ಮೂಲಕ ಕಣ್ಗಾವಲು ಹೆಚ್ಚಿಸಿದ್ದು . ರಾಜ್ಯ ಸರ್ಕಾರವು ನಗರದಾದ್ಯಂತ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಎನ್ವಿಡಿ ಮತ್ತು ಸಿಸಿಟಿವಿ ಕ್ಯಾಮೆರಾಗಳಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.ಆದರೆ ಇದುವರೆಗೂ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಅವರ ಸಂಪರ್ಕ ಬಹಿರಂಗವಾಗಿಲ್ಲ ಎಂದು ತಿಳಿಸಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳಿಗೂ ಹೆಚ್ಚು ಕಾಲ ಕಾದಿದ್ದರಿಂದ ರಾಮ ಭಕ್ತರು ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಬಯಸುತ್ತಿದ್ದು ಗಣ್ಯರು ಹಾಗೂ ಸಮಾಜದ ಎಲ್ಲ ವರ್ಗದ ಜನರು ಪಾಲ್ಗೊಳ್ಳಲಿದ್ದಾರೆ. ಜನವರಿ 22 ರಂದು ಭವ್ಯ ಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸಿದ್ಧರಾಗಿದ್ದಾರೆ. ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆವಹಿಸಲಾಗುತ್ತಿದೆ. ಹಾಗೂ ಬಿಗಿ ಬಂದೋಬಸ್ತಿನ ಜೊತೆಗೆ ಎಲ್ಲಾ ಮೂಲೆ ಮೂಲೆಗಳಲ್ಲಿ ಹದ್ದಿನ ಕಣ್ಣು ಈಡಲಾಗಿದೆ ಎಂಬುದಂತೂ ಸತ್ಯ.


