ಹೈದರಾಬಾದ್ : ಪತ್ರಕರ್ತರಂತೆ ನಟಿಸುತ್ತಾ ರಾಜಕೀಯ ನಾಯಕರ ಕುಟುಂಬಗಳನ್ನು ನಿಂದಿಸುವ ರೀತಿಯಲ್ಲಿ ಅಪಪ್ರಚಾರ ಮಾಡಿದರೆ ಅಂತಹವರನ್ನು ಬಹಿರಂಗವಾಗಿ ಬೆತ್ತಲೆ ಮೆರವಣಿಗೆ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಇದಲ್ಲದೆ, ಆನ್ಲೈನ್ಗಳಲ್ಲಿ ತುಚ್ಛವಾದ ವಿಷಯಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಅವರು ಬೆದರಿಕೆ ಹಾಕಿದ್ದಾರೆ. ಯುಟ್ಯೂಬ್ ಚಾನೆಲ್ಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕಾಗಿ ಇಬ್ಬರು ಮಹಿಳಾ ಪತ್ರಕರ್ತರಾದ ರೇವತಿ ಪೊಗದಂಡ ಹಾಗೂ ತನ್ವಿ ಯಾದವ್ ಎಂಬಿಬ್ಬರನ್ನು ಬಂಧಿ ಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮೇಲಿನ ಹೇಳಿಕೆ ನೀಡಿದ್ದಾರೆ.
ಆನ್ಲೈನ್ನಲ್ಲಿ ಇಂಥ ಪೋಸ್ಟ್ ಮಾಡುವುದಕ್ಕಾಗಿ ಎದುರಾಳಿ ಭಾರತ್ ರಾಷ್ಟç ಸಮಿತಿ ಹಣ ನೀಡಿದೆ ಎಂದೂ ಮುಖ್ಯಮಂತ್ರಿ ಆರೋಪಿಸಿದ್ದಾರೆ. ತಮ್ಮ ಕುಟುಂಬ ಹಾಗೂ ಇತರ ಜನಪ್ರತಿನಿಧಿಗಳ ವಿರುದ್ಧ ವಿರುದ್ಧ ನಿಂದನಾತ್ಮಕ ಪೋಸ್ಟ್ ಮಾಡಿರುವುದಕ್ಕೆ ಅಸಮಾಧಾನಗೊಂಡಿರುವ ರೇವಂತ ರೆಡ್ಡಿ ಅವರು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ಗೊತ್ತುವಳಿ ಕುರಿತ ಚರ್ಚೆಯ ಸಂದರ್ಭದಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ತಮ್ಮ ಕುಟುಂಬ ಸದಸ್ಯರ ಮೇಲೆ ಅಪಮಾನಕಾರಿ ವಿಷಯವಸ್ತುಗಳನ್ನು ಒಳಗೊಂಡ ಪೋಸ್ಟ್ ಮಾಡಿದ ಪತ್ರಕರ್ತರನ್ನು ಬಂಧಿಸಿದರೆ ಎದುರಾಳಿ ಬಿಆರ್ಎಸ್ ಖಂಡಿಸುತ್ತದೆ ಎಂದೂ ರೇವಂತ ರೆಡ್ಡಿ ಕಿಡಿಕಾರಿದ್ದರು.
ಬಿಆರ್ಎಸ್ ನಾಯಕರು ಸಹಿಸುವರೇ?
ಬಿಆರ್ಎಸ್ ನಾಯಕರು ತಮ್ಮ ಕುಟುಂಬದವರನ್ನು ನಿಂದಿಸಿದಾಗ ಅದನ್ನು ಸಹಿಸುವರೇ? ಈ ಮಹಿಳೆಯರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಬಳಸಿರುವ ಭಾಷೆ ನೋಡಿ ನನಗೆ ಆಘಾತವಾಯಿತು. ಈ ರೀತಿಯ ಭಾಷೆ ಬಳಸುವುದು ತೆಲುಗು ಸಂಸ್ಕೃತಿಯಲ್ಲ. ಇತ್ತೀಚಿನ ದಿನಗಳಲ್ಲಿ ಯಾರೂ ಬೇಕಾದರೂ ಯುಟ್ಯೂಬ್ ಚಾನಲ್ ಆರಂಭಿಸಿ ತಮಗೆ ಬೇಕಾದುದನ್ನು ಹೇಳುವ ಪ್ರವೃತ್ತಿ ಹೆಚ್ಚಿದೆ. ರಾಜಕೀಯ ನಾಯಕರನ್ನು ಅವರೇನಾದರೂ ಟೀಕಿಸಲಿ. ಆದರೆ ಅವರ ಕುಟುಂಬದವರ ವಿರುದ್ಧ ಮಾತನಾಡುವುದನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವಿಡಿಯೋದಲ್ಲಿ ರೈತನೊಬ್ಬ ತನಗೆ ಕಲ್ಯಾಣ ಯೋಜನೆಯ ಪ್ರಯೋಜನ ದೊರಕದಿರುವುದಕ್ಕೆ ಕಾಂಗ್ರೆಸ್, ಮುಖ್ಯಮಂತ್ರಿ ಮತ್ತವರ ತಾಯಿಯನ್ನು ನಿಂದಿಸಿದ್ದೆನ್ನೆಲಾಗಿದೆ.


