ಹಾಸನ : ಜಿಲ್ಲೆಯ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ನಂಬಲಸಾಧ್ಯವಾದ ಘಟನೆಯೊಂದು ನಡೆದಿದೆ. ಬಡವರ ಪಾಲಿನ ಸಂಜೀವಿನಿ ಆಗಬೇಕಿದ್ದ ಆಸ್ಪತ್ರೆ ಈಗ ಲೂಟಿಕೋರರ ಅಡ್ಡಯಾಗಿ ಮಾರ್ಪಟ್ಟಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ವೈದ್ಯಕೀಯ ಉಪಕರಣಗಳು ರಾತ್ರೋರಾತ್ರಿ ಮಾಯವಾಗಿವೆ!.
ಬರೋಬ್ಬರಿ 24 ಲಕ್ಷ ರೂಪಾಯಿ ಬೆಲೆಬಾಳುವ ಸ್ಕ್ಯಾನಿಂಗ್ ಮಿಷನ್ ಈಗ ಆಸ್ಪತ್ರೆಯಲ್ಲಿ ಇಲ್ಲವೇ ಇಲ್ಲ! ಇಷ್ಟು ದಿನ ಸುಮ್ಮನಿದ್ದ ಆಡಳಿತ ಮಂಡಳಿ, ಈಗ ಡಿಹೆಚ್‌ಓ ಅವರು ಹೊಸ ವೈದ್ಯರ ನೇಮಕಕ್ಕೆ ಮುಂದಾದಾಗ ಈ ಆಘಾತಕಾರಿ ಸತ್ಯ ಬಯಲಾಗಿದೆ.
24 ಲಕ್ಷ ರೂ. ಮೌಲ್ಯದ ಸ್ಕ್ಯಾನಿಂಗ್ ಮಿಷನ್. 5 ಅತ್ಯಾಧುನಿಕ ವೆಂಟಿಲೇಟರ್ ಮಾನಿಟರ್‌ಗಳು.10 ಆಕ್ಸಿಜನ್ ಸಿಲಿಂಡರ್‌ಗಳು ಮಾರುಕಟ್ಟೆ ಪಾಲಾಗಿವೆ. ಈ ಮಹಾ ಲೂಟಿಯ ಹಿಂದೆ ಆಸ್ಪತ್ರೆಯ ಒಳಗಿನವರ ಕೈವಾಡ ಇರುವುದು ಈಗ ಜಗಜ್ಜಾಹೀರಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಆಸ್ಪತ್ರೆಯ ಕೊಠಡಿಯಿಂದ ಮಿಷನ್ ಹೊತ್ತೊಯ್ಯುವ ದೃಶ್ಯ ಸೆರೆಯಾಗಿದೆ. ಈ ಕೃತ್ಯದಲ್ಲಿ ಆಸ್ಪತ್ರೆ ಸಿಬ್ಬಂದಿ ಪ್ರದೀಪ್ ಹಾಗೂ ಖಾಸಗಿ ಆಂಬುಲೆನ್ಸ್ ಮಾಲೀಕ ಸುಫಿಯಾನ್ ಶಾಮೀಲಾಗಿದ್ದಾರೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.


