ಹಾಸನ : ಆಲೂರು ತಾಲೂಕಿನ ಕೆ ಹೊಸಕೋಟೆ ಹೋಬಳಿ, ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಮಲ್ಲಾಪುರ ಗ್ರಾಮದ ಸರ್ವೇ ನಂಬರ್ 103 ರಲ್ಲಿ 3 ಎಕರೆ 10 ಗುಂಟೆ ವಿಸ್ತೀರ್ಣದ ಜಮೀನನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಶಾಲೆಗಾಗಿ ಮಂಜೂರಾಗಿದ್ದು, ಕಟ್ಟಡದ ಕಾಮಗಾರಿಯು ಜಿಲ್ಲಾಧಿಕಾರಿಯವರ ಆದೇಶದಂತೆ ನಡೆಯುತ್ತಿದ್ದು, ಬಾಳ್ಳುಪೇಟೆ – ಹೊಸಕೋಟೆ ಮುಖ್ಯ ರಸ್ತೆಯಿಂದ 300 ಮೀಟರ್ ಅಂತರದಲ್ಲಿದ್ದು, ಅಕ್ಕಪಕ್ಕದ ಜಾಗವು ಜನ ವಸತಿ ಪ್ರದೇಶವಾಗಿದೆ. ಈ ಭಾಗವು ಮಲೆನಾಡು ಭಾಗವಾದರೂ, ಕಾಡಾನೆಗಳ ಹಾವಳಿ ಇಲ್ಲದ ಜಾಗವಾಗಿದೆ. ಈ ಪ್ರದೇಶವು ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ನಡೆಸಲು, ಶಾಲಾ ಕಟ್ಟಡಕ್ಕೂ ಎಲ್ಲಾ ಹಿತ ದೃಷ್ಟಿಯಿಂದ ಸೂಕ್ತ ಜಾಗವಾಗಿದೆ.
ಈಗಾಗಲೇ ಈ ಜಾಗವನ್ನು ತಹಸಿಲ್ದಾರ್, ಉಪತಾಹಸಿಲ್ದಾರ್, ರೆವೆನ್ಯೂ ಇನ್ಸ್ಪೆಕ್ಟರ್, ವಿಲೇಜ್ ಅಕೌಂಟೆಂಟ್ ಪಂಚಾಯಿತಿಗೆ ಸಂಬಂಧಪಟ್ಟ ಅಧ್ಯಕ್ಷರು, ಸದಸ್ಯರುಗಳು, ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶಾಲಾ ಕಟ್ಟಡ ನಿರ್ಮಿಸಲು ವಿದ್ಯಾಭ್ಯಾಸಕ್ಕೆ ಸೂಕ್ತ ಸ್ಥಳವೆಂದು ಪರಿಗಣಿಸಿದ ನಂತರವೇ ಡಾಕ್ಟರ್ ಬಿಆರ್ ಅಂಬೇಡ್ಕರ್ ವಸತಿ ಶಾಲೆ ನಿರ್ಮಿಸಲು ಮಂಜೂರು ಮಾಡಲಾಗಿದೆ. ಈ ಸರ್ವೇ ನಂಬರ್ ನಲ್ಲಿ ಒಟ್ಟು 13 ಎಕರೆ 28 ಗುಂಟೆ ಸರ್ಕಾರಿ ಗೋಮಾಳದ ಜಾಗವಾಗಿದ್ದು, ಅದರಲ್ಲಿ ಅಂಬೇಡ್ಕರ್ ವಸತಿ ಶಾಲೆಗಾಗಿ ಮೂರು ಎಕರೆ 10 ಗುಂಟೆ, ಗುಂಪು ಮನೆ ಯೋಜನೆಗಾಗಿ 2 ಎಕರೆ, ಸಾರ್ವಜನಿಕ ಸ್ಮಶಾನಕ್ಕಾಗಿ 2 ಎಕರೆ, ಕಸ ತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ 20 ಗುಂಟೆ ಜಾಗವನ್ನು ಮಂಜೂರು ಮಾಡಲಾಗಿದೆ. ಬಾಕಿ ಉಳಿದ ಜಾಗವೆಲ್ಲ ಈಗಾಗಲೇ ಭೂಗಳ್ಳರ ವಶವಾಗಿದೆ. ಅದರಂತೆ ಈ ಜಾಗವನ್ನು ಕಾಣದ ಕೈಗಳು ಕಬಳಿಸಲು ಕೆಲಸ ಮಾಡುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಒಂದು ಸುಂದರವಾದ ಶಾಲೆ ನಿರ್ಮಾಣವಾಗುತ್ತಿರುವುದನ್ನು ಸಹಿಸದ ಕೆಲ ಕಿಡಿಗೇಡಿಗಳು, ದುಷ್ಟ ಶಕ್ತಿಗಳು, ಕೆಟ್ಟ ಮನಸ್ಥಿತಿಯು ಉಳ್ಳವರು, ದಲಿತ ಮಕ್ಕಳ ವಿದ್ಯಾಭ್ಯಾಸವನ್ನು ಸಹಿಸದ ಕೆಲವರು, ಅಂಬೇಡ್ಕರ್ ಶಾಲೆ ಎಂದರೆ ಕೇವಲ ದಲಿತ ಮಕ್ಕಳಿಗಾಗಿ ನಿರ್ಮಿಸಲಾಗುತ್ತಿರುವ ಶಾಲೆ ಎಂಬ ಕೆಟ್ಟ ಮನಸ್ಥಿತಿಯುಳ್ಳವರು, ಈ ಭಾಗದಲ್ಲಿ ಅಂಬೇಡ್ಕರ್ ವಸತಿ ಶಾಲೆ ಆಗಬಾರದು ಎಂಬ ಕಾರಣಕ್ಕಾಗಿ, ಹಾಗೂ ಈ ಭೂಮಿಯನ್ನು ಕಬಳಿಸುವ ದುರುದ್ದೇಶದಿಂದ ಇಲ್ಲಿ ಶಾಲೆ ಕಟ್ಟಡ ನಿರ್ಮಾಣ ಮಾಡುವುದು ಬೇಡ. ಈ ಜಾಗದಲ್ಲಿ ಮುಂಚೆ ಸ್ಮಶಾನವಿತ್ತು, ಈ ಭಾಗದಲ್ಲಿ ತಲೆ ಬುರುಡೆ ಸಿಕ್ಕಿದೆ, ಈ ಜಾಗದಲ್ಲಿ ಶಾಲೆ ಕಟ್ಟಡ ನಿರ್ಮಾಣ ಮಾಡಿದರೆ ಕೆಡುಕಾಗುತ್ತದೆ. ಓದುವ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿದ್ದಾರೆ.
ಅಲ್ಲದೆ ಕೆಲಸ ಮಾಡುವ ಗುತ್ತಿಗೆದಾರರಿಗೆ ಹಾಗೂ ಇಂಜಿನಿಯರ್ ಗಳಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಇದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಸಹಿಸುವುದಿಲ್ಲ, ಈ ರೀತಿಯ ಕುತಂತ್ರಗಳು ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲು ನಾವು ಎಂದೆಂದಿಗೂ ಶತ ಸಿದ್ದ ಎಂದು ದಲಿತ ಸಂಘರ್ಷ ಸಮಿತಿಯ ಹಲವು ಮುಖಂಡರು ತಿಳಿಸಿದ್ದಾರೆ.
ಇಷ್ಟು ದಿನ ಕಾಣದ ಬುರುಡೆ ಈಗ ಅಲ್ಲಿ ಕಾಣಿಸಿಕೊಂಡದ್ದಾದರೂ ಹೇಗೆ ?
ಸುಮಾರು ಒಂದು ವರ್ಷಗಳಿಂದ ವಸತಿ ಕಟ್ಟಡದ ಕಾಮಗಾರಿಯೂ ನಡೆಯುತ್ತಿದೆ. ಇದುವರೆಗೂ ನಿರಂತರವಾಗಿ ಜೆಸಿಬಿ ಕೆಲಸ ಮಾಡುತ್ತಿದೆ, ಆಗಲೂ ಯಾವುದೇ ಮೂಳೆ ಆಗಲಿ ಬುರುಡೆ ಆಗಲಿ ಯಾವುದು ಕೂಡ ಕಾಣಿಸಿಕೊಂಡಿಲ್ಲ. ಹಲವಾರು ಟ್ರ್ಯಾಕ್ಟರ್ ಗಳು, ಟಿಪ್ಪರ್ ಗಳು, ಕಾರು, ಬೈಕುಗಳು ಇನ್ನೂ ಇತರ ಅನೇಕ ವಾಹನಗಳು ಈ ಜಾಗದಲ್ಲೆಲ್ಲಾ ಒಡ್ಡಾಡಿವೆ, ಆಗಲೂ ಯಾರ ಕಣ್ಣಿಗೂ ಯಾವುದೇ ಮೂಳೆಗಳಾಗಲಿ ಬುರುಡೆಗಳಾಗಲಿ ಕಾಣಿಸಿಕೊಂಡಿಲ್ಲ. ಯಾಂತ್ರಿಕವಾಗಿ ಅಲ್ಲದೆ ನೂರಾರು ಜನ ಕಾರ್ಮಿಕರು, ಇಲ್ಲಿ ಸುಮಾರು ಒಂದು ವರ್ಷದಿಂದಲೂ ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ಯಾರ ಕಣ್ಣಿಗೂ ಯಾವುದೇ ರೀತಿಯ ಮೂಳೆಗಳಾಗಲಿ ಬುರುಡೆಗಳಾಗಲಿ ಕಾಣಿಸಿಕೊಂಡಿಲ್ಲ. ನೂರಾರು ಜನರು ಸಾರ್ವಜನಿಕರು ಕೆಲಸ ನಡೆಯುತ್ತಿರುವುದನ್ನು ನೋಡಿಕೊಂಡು ಎಲ್ಲಡೆ ಅಡ್ಡಾಡಿದ್ದಾರೆ, ಆಗಲು ಸಹಾಯ ಯಾವುದೇ ಮೂಳೆಗಳಾಗಲಿ ಬುರುಡೆಗಳಾಗಲಿ ಕಾಣಿಸಿಕೊಂಡಿಲ್ಲ. ಇದೀಗ ಇದ್ದಕ್ಕಿದ್ದಂತೆ ಈ ಪ್ರದೇಶದಲ್ಲಿ ಬುರುಡೆ ಕಾಣಿಸಿಕೊಂಡದ್ದಾದರೂ ಹೇಗೆ? ಈ ಪ್ರದೇಶದಲ್ಲಿ ಇಷ್ಟು ದಿನ ಯಾರ ಕಣ್ಣಿಗೂ ಕಾಣಿಸದ ಬುರುಡೆ ಕೆಲ ನಾಲ್ಕೈದು ಜನರ ಕಣ್ಣಿಗೆ ಕಾಣಿಸಲು ಹೇಗೆ ಸಾಧ್ಯ? ಇದು ಭೂಕಬಳಿಸುವ ಯಾರ ಕುತಂತ್ರಿಗಳೇ ತಂದು ಹಾಕಿ ಸಂಚು ರೂಪಿಸಿರುವ ಕೆಲಸ ಎಂದು ಸುತ್ತಮುತ್ತಲ ಗ್ರಾಮಸ್ಥರ ಸಾರ್ವಜನಿಕರ ಆಕ್ರೋಶ.


