ಹಾಸನ : ಆರ್ಎಸ್ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ನಡೆ ಹಾಗೂ ಸರ್ಕಾರ ಹೊರಡಿಸಿರುವ ಆದೇಶದ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ. ನಗರದಲ್ಲಿ ಸೋಮವಾರ ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಆರ್ಎಸ್ಎಸ್ ಮುಟ್ಟಿದವರು ನಾಶವಾಗಿ ಹೋಗಿದ್ದಾರೆ ಮತ್ತು ನಾಶವಾಗುತ್ತಾರೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದು ಆರ್ಎಸ್ಎಸ್ ಬ್ಯಾನ್ ಮಾಡಿದಂತಹ ಸಂದರ್ಭದಲ್ಲಿ ಸೋತು ಸುಣ್ಣವಾಗಿ ಹೋದರು.
ಈ ಪ್ರಿಯಾಂಕ್ ಖರ್ಗೆ ಕುನ್ನಿ, ಯಾವ ಲೆಕ್ಕ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಮಾಡಿ ಹಿಂದೂ ಧರ್ಮ ಉಳಿಸುವ ವ್ಯವಸ್ಥೆಯನ್ನು ಆರ್ಎಸ್ಎಸ್ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಮಾಡದೆ ಕಾಲಹರಣ ಮಾಡುತ್ತಿದೆ. ಕೇವಲ ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಾ ತುಘಲಕ್ ರೀತಿ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೂರು ವರ್ಷ ತುಂಬಿರುವಂತಹ ಆರ್ಎಸ್ಎಸ್ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಸರ್ಕಾರದಲ್ಲಿ ಚರ್ಚೆ ನಡೆಯುತ್ತಿದೆ. ನಮ್ಮ ಸಂಘಟನೆಯ ಕಾರ್ಯ ಚಟುವಟಿಕೆಗಳಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕೋರ್ಟ್ ಕೂಡ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಈ ಸರ್ಕಾರ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡುತ್ತಿದೆ ಎಂದು ಮುಖಂಡರು ವಾಗ್ದಾಳಿ ನಡೆಸಿದರು.