i
ಹಳೆಯಂಗಡಿ : ಪ್ರಿಯದರ್ಶಿನಿ ಸಹಕಾರಿ ಸಂಘದಲ್ಲಿ ₹20 ಲಕ್ಷ ಸಾಲ ಮಂಜೂರು ಮಾಡಿ, ಸದಸ್ಯನಿಗೆ ಕೇವಲ ₹5 ಲಕ್ಷ ನೀಡಿ ಉಳಿದ ಹಣವನ್ನು ಬೇರೆ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ ವಂಚಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪರಿಶಿಷ್ಟ ಜಾತಿಗೆ ಸೇರಿದ ಸಂಘದ ಸದಸ್ಯ ನಾಗೇಶ್ ಅವರು ಮದುವೆಗಾಗಿ ₹5 ಲಕ್ಷ ಸಾಲ ಪಡೆಯುವ ಉದ್ದೇಶದಿಂದ ಜಾಗದ ಮೂಲ ದಾಖಲೆಗಳನ್ನು ಸಂಘಕ್ಕೆ ನೀಡಿದ್ದರು. ಆದರೆ, ಅವರಿಂದ ಖಾಲಿ ಹಾಳೆಗಳಿಗೂ ಸಹಿ ಪಡೆದು, ಒಟ್ಟು 66 ಸೆಂಟ್ಸ್ ಜಾಗವನ್ನು ಅಡಮಾನವಿಟ್ಟು ಅವರ ಹೆಸರಿನಲ್ಲಿ ₹20 ಲಕ್ಷ ಸಾಲ ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 2023ರ ಆಗಸ್ಟ್ 7ರಂದು ಆಡಳಿತ ಮಂಡಳಿ ಸಭೆಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಸಾಲ ಮಂಜೂರು ಮಾಡಲಾಗಿದ್ದು, ನಾಗೇಶ್ ಅವರ ಗಮನಕ್ಕೆ ಬಾರದಂತೆ ಸಾಲದ ಹಣವನ್ನು ಮೊದಲು ಶೇಖ್ ವಾಜಿರ್ ಅವರ ಕೆನರಾ ಬ್ಯಾಂಕ್ ಖಾತೆಗೆ ವರ್ಗಾಯಿಸಿ, ಬಳಿಕ ನಾಲ್ಕನೇ ಹಾಗೂ ಆರನೇ ಆರೋಪಿಗಳ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಸಂಘದ ಅಧ್ಯಕ್ಷ ವಸಂತ ಬೆರ್ನಾಡ್, ಪಡುಬಿದ್ರಿ ಶಾಖೆಯ ವ್ಯವಸ್ಥಾಪಕ, ಹಳೆಯಂಗಡಿ ಮುಖ್ಯ ಕಚೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಏಳು ಮಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಹಾಗೂ ಸಮಗ್ರ ತನಿಖೆ ನಡೆಸಿ ನಾಗೇಶ್ ಅವರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಸೆಪ್ಟೆಂಬರ್ 7ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗೇಶ್, “ನನ್ನ ಜಾಗದ ದಾಖಲೆಗಳನ್ನು ಬಳಸಿಕೊಂಡು ನನ್ನ ಹೆಸರಿನಲ್ಲಿ ಭಾರಿ ಸಾಲ ಪಡೆದು ವಂಚಿಸಲಾಗಿದೆ. ನನಗೆ ನ್ಯಾಯ ದೊರಕಿಸಿಕೊಡಬೇಕು” ಎಂದು ಮನವಿ ಮಾಡಿದರು.

