ಬೆಂಗಳೂರು : ಬಹಳ ಶ್ರಮಪಟ್ಟು ದುಡಿದು, ಹಣ ಗಳಿಸಿ, ಅದನ್ನು ಉಳಿತಾಯ ಮಾಡುವುದಕ್ಕೆ ಹರಸಾಹಸ ಪಡುತ್ತಿದ್ದರೂ ಕೆಲವರಿಗೆ ಕೈಯಲ್ಲಿ ಹಣ ಉಳಿಯುತ್ತಿರುವುದಿಲ್ಲ. ಇನ್ನು ಜನ್ಮ ಜಾತಕದಲ್ಲಿ ದೋಷ ಇದೆಯಾ ಎಂದು ನೋಡಿದರೆ ಅದು ಏನೂ ಸಮಸ್ಯೆ ಇರುವುದಿಲ್ಲ. ಆದರೆ ಇರುವ ಮನೆಯಲ್ಲೇ ವಾಸ್ತು ಸಮಸ್ಯೆ ಇದ್ದಲ್ಲಿ ಹೀಗೆ ಕೈಯಲ್ಲಿ ಹಣ ಇರುವುದಿಲ್ಲ.
ಅದೇ ರೀತಿ ವ್ಯಾಪಾರದಲ್ಲಿ ಎಷ್ಟು ಶ್ರಮ ಹಾಕಿದರೂ ಯಶಸ್ಸು ದಕ್ಕುವುದಿಲ್ಲ. ಆದ್ದರಿಂದ ವಾಸ್ತುವನ್ನು ನಂಬುವವರಿಗೆ ಇಲ್ಲಿ ಕೆಲವು ಟಿಪ್ಸ್ ಗಳಿವೆ. ನಂಬಿಕೆ ಇದ್ದರೆ ಅನುಸರಿಸಬಹುದು. ಇದಕ್ಕಾಗಿಯೇ ಖರ್ಚು ಮಾಡಿ ಎಂಬುದು ನಮ್ಮ ಸಲಹೆಯಲ್ಲ. ಈ ತಪ್ಪುಗಳಾಗದಂತೆ ನೋಡಿಕೊಳ್ಳಿ. ಈಗ ಮನೆ ನಿರ್ಮಾಣ ಮಾಡುವುದಿದ್ದರೆ ಈ ನಿಯಮಗಳನ್ನು ಪಾಲಿಸಿದರೆ ಅನುಕೂಲವಾದೀತು.
ಈಶಾನ್ಯದಲ್ಲಿ ದೇವರ ಕೋಣೆ..
ಉತ್ತರ ದಿಕ್ಕು ಕುಬೇರ ಸ್ಥಾನ. ಕುಬೇರ ಎಂದರೆ ಸಂಪತ್ತಿನ ದೇವತೆ. ಈ ಸ್ಥಾನವನ್ನು ಸಕಾರಾತ್ಮಕವಾಗಿ ಹಾಗೂ ಚೈತನ್ಯಪೂರ್ಣವಾಗಿ ಇರಿಸಿಕೊಳ್ಳಬೇಕು. ಆ ಶಕ್ತಿಯೇ ಸಂಪತ್ತು ಹೆಚ್ಚಲು ಕಾರಣ ಆಗುತ್ತದೆ. ಈಶಾನ್ಯ ದಿಕ್ಕಿನಲ್ಲಿ ಯಾವುದೇ ನಿರ್ಮಾಣ ಮಾಡಬಾರದು. ಆ ಸ್ಥಳ ಮುಕ್ತವಾಗಿರಬೇಕು. ಅಲ್ಲಿ ದೇವರ ಪೂಜೆಗೆ ಕೋಣೆ ನಿರ್ಮಿಸಿದರೆ ಬಹಳ ಶ್ರೇಷ್ಠ. ಒಂದು ವೇಳೆ ನಿರ್ಮಿಸದಿದ್ದರೆ ಆ ಸ್ಥಳವನ್ನು ಶುದ್ಧವಾಗಿ, ಮುಕ್ತವಾಗಿ ಇಟ್ಟುಕೊಳ್ಳಬೇಕು. ಪೂರ್ವ ಹಾಗೂ ಉತ್ತರ ದಿಕ್ಕಿಗೆ ತಡೆಯೊಡ್ಡಿದರೆ ಹಣಕಾಸಿನ ಸಮಸ್ಯೆ ಆಗುತ್ತದೆ. ಖರ್ಚು ಹೆಚ್ಚಳ ಆಗುತ್ತದೆ. ಸಂಪಾದನೆ ಸಾಮರ್ಥ್ಯ ಕಡಿಮೆ ಆಗುತ್ತದೆ.
ಪೂರ್ವ ಮತ್ತು ಉತ್ತರ ದಿಕ್ಕಿಗೆ ಮುಖ ಮಾಡಿ ಕೆಲಸ .
ಮನೆಯ ಮುಖ್ಯ ದ್ವಾರ ಅಥವಾ ಪ್ರವೇಶದಲ್ಲಿ ಕಂಬ, ವೈರ್, ಪಿಟ್ ಹೀಗೆ ಯಾವುದೇ ತಡೆ ಇಲ್ಲದಂತೆ ನೋಡಿಕೊಳ್ಳಬೇಕು. ಇನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಬಾರದು. ಏಕೆಂದರೆ ಈ ಸ್ಥಳದಲ್ಲಿ ಬೇಕಾದರೆ ಸಂಪ್ ಮಾಡಬಹುದೇ ವಿನಾ ಓವರ್ ಹೆಡ್ ಟ್ಯಾಂಕ್ ಮಾಡಬಾರದು. ಯಾವುದಾದರೂ ಕೆಲಸ ಮಾಡುವಾಗ, ಊಟ ಮಾಡುವಾಗ, ಕೂರುವಾಗ, ಟೀವಿ ನೋಡುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕೂರಬೇಕು. ಮಲಗುವಾಗ ದಕ್ಷಿಣಕ್ಕೆ ತಲೆ ಮಾಡಿ, ಉತ್ತರದ ಕಡೆಗೆ ಕಾಲಿರಬೇಕು. ಪಶ್ಚಿಮ, ದಕ್ಷಿಣದಲ್ಲಿ ತೆರೆದ ಸ್ಥಳವನ್ನು ಬಿಡಬೇಡಿ. ಮನೆಯ ಮುಖ್ಯ ದ್ವಾರ ಪಶ್ಚಿಮ ಅಥವಾ ದಕ್ಷಿಣದಲ್ಲಿ ಇದ್ದಲ್ಲಿ ಬಾಲ್ಕನಿಗಾಗಿ ಆ ದಿಕ್ಕಿಗೆ ಹೆಚ್ಚು ಸ್ಥಳ ಬಿಡಬೇಡಿ.
ಮನೆಯ ಸುತ್ತ ಎಷ್ಟು ಜಾಗ ಬಿಡಬೇಕು?
ಮನೆಯ ಸುತ್ತಲೂ ಜಾಗ ಬಿಡಬೇಕು. ಇದರಿಂದ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಪೂರ್ವ ಮತ್ತು ಉತ್ತರದಲ್ಲಿ ಹೆಚ್ಚು ಸ್ಥಳ ಬಿಡಬೇಕು ಎಂಬುದು ಬಹಳ ಮಂದಿಗೆ ಗೊತ್ತಿಲ್ಲ. ಅಂದರೆ ದಕ್ಷಿಣ ಹಾಗೂ ಪಶ್ಚಿಮದಲ್ಲಿ ಬಿಡುವುದಕ್ಕಿಂತ ಪೂರ್ವ- ಉತ್ತರದಲ್ಲಿ ಹೆಚ್ಚು ಸ್ಥಳ ಬಿಡಬೇಕು. ಕಚೇರಿಯಲ್ಲಿಯಾದರೂ ಕೆಲಸ ಮಾಡುವಾಗ ಉತ್ತರಕ್ಕೆ ಮುಖ ಮಾಡಿ ಕೂರಬೇಕು. ಬೀಮ್ ಕೆಳಗೆ ಕೂರಬಾರದು. ಇನ್ನು ಮನೆಯ ಮುಖ್ಯ ದ್ವಾರ ಇಡುವುದಕ್ಕೆ ಪೂರ್ವ ಹಾಗೂ ಉತ್ತರ ಅತ್ಯುತ್ತಮ ಆಯ್ಕೆ ಆಗಿರುತ್ತದೆ. ಓವರ್ ಹೆಡ್ ಟ್ಯಾಂಕ್ ನೈರುತ್ಯ ದಿಕ್ಕಿನಲ್ಲಿ ಇರಬೇಕು. ಮಾಸ್ಟರ್ ಬೆಡ್ ರೂಮ್ ನೈರುತ್ಯದಲ್ಲೂ ಹಾಗೂ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲೂ ಇರುವುದು ಸೂಕ್ತ. ಮನೆಯ ಮುಖ್ಯ ಬಾಗಿಲನ್ನು ಟೀಕ್ ವುಡ್ ನಲ್ಲಿ ಇಡುವುದು ಶುಭ.